ಅಕ್ಕಮಹಾದೇವಿ ಮಹಿಳಾ ವಿ.ವಿ. ಮುಚ್ಚುವ ಪ್ರಶ್ನೆಯೇ ಇಲ್ಲ: ಡಾ.ಸಿ.ಎನ್ ಅಶ್ವತ್ಥನಾರಾಯಣ
ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮತ್ತಷ್ಟು ವಿಸ್ತರಿಸುವ ಆಲೋಚನೆ ಸರ್ಕಾರಕ್ಕಿದೆಯೇ ವಿನಾ ಅದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
Published: 25th January 2022 01:44 PM | Last Updated: 25th January 2022 01:46 PM | A+A A-

ಡಾ.ಸಿ.ಎನ್ ಅಶ್ವತ್ಥನಾರಾಯಣ
ಬೆಂಗಳೂರು: ವಿಜಯಪುರದಲ್ಲಿ ಕಳೆದ 2 ದಶಕಗಳಿಂದ ನಾಡು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಈಗ ಏಕಾಏಕಿಯಾಗಿ ಕೊನೆಗಾಣಿಸುವ ಸಂಚು ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಅಕ್ಕಮಹಾದೇವಿ ಮಹಿಳಾ ವಿ.ವಿ. ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮತ್ತಷ್ಟು ವಿಸ್ತರಿಸುವ ಆಲೋಚನೆ ಸರ್ಕಾರಕ್ಕಿದೆಯೇ ವಿನಾ ಅದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಇದರ ಜತೆಗೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂತನ ಕ್ಯಾಂಪಸ್ ನಿರ್ಮಾಣ ಮಾಡುವುದರಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಸಮಕಾಲೀನ ಜಗತ್ತಿನಲ್ಲಿ ಮಹಿಳೆಯರನ್ನು ಕುರಿತ ಅಧ್ಯಯನ ವಿಸ್ತೃತವಾಗಿ ನಡೆಯಬೇಕಾಗಿದೆ. ಇದಕ್ಕೆ ತಕ್ಕಂತೆ ಮಹಿಳಾ ವಿ.ವಿ.ಯ ಚಟುವಟಿಕೆಗಳನ್ನು ಹೇಗೆ ವಿಸ್ತರಿಸಬೇಕು ಎನ್ನುವ ಕುರಿತು ಸಮಾಲೋಚಿಸಲಾಗುತ್ತಿದೆ. ಆದರೆ ಕೆಲವರು ವಿನಾ ಕಾರಣ ಗುಲ್ಲೆಬ್ಬಿಸುತ್ತಿರುವುದು ವಿಷಾದನೀಯ ಎಂದರು.
ಸಂಸ್ಕೃತ ವಿವಿ ಕ್ಯಾಂಪಸ್ ನಿರ್ಮಾಣ ಕುರಿತಂತೆ ಕೇಳಿದ ಪ್ರಶ್ನೆಗೆ ಅವರು, ಈ ವಿವಿ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇದುವರೆಗೂ ಇದಕ್ಕೊಂದು ಸ್ವತಂತ್ರ ಮತ್ತು ಸುಸಜ್ಜಿತ ಕ್ಯಾಂಪಸ್ ಇರಲಿಲ್ಲ. ನಮ್ಮ ಸರ್ಕಾರ ಅದನ್ನು ಮಾಡುತ್ತಿದೆ ಅಷ್ಟೆ. ಮ್ಯಾಕ್ಸ್ ಮುಲ್ಲರ್ ಭವನಕ್ಕೆ ಹೋಗಿ ನೋಡಿದರೆ ಸಂಸ್ಕೃತ ಅಧ್ಯಯನವನ್ನು ನಾವು ಏಕೆ ಮಾಡಬೇಕೆನ್ನುವುದು ಗೊತ್ತಾಗುತ್ತದೆ ಎಂದರು.
ಕನ್ನಡಕ್ಕೆ ನಮ್ಮ ಸರ್ಕಾರ ಕೊಟ್ಟಿರುವಷ್ಟು ಆದ್ಯತೆಯನ್ನು ಯಾರೂ ಕೊಟ್ಟಿರಲಿಲ್ಲ. ಪದವಿಯಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿದಾಗ ನಮ್ಮ ಕನ್ನಡ ಹೋರಾಟಗಾರರು ಕನಿಷ್ಠಪಕ್ಷ ಅದನ್ನು ಸ್ವಾಗತಿಸಲೂ ಇಲ್ಲ. ಈಗ ಹೈಕೋರ್ಟ್ ಇದಕ್ಕೆ ತಡೆ ನೀಡಿದ್ದು, ಮಧ್ಯಂತರ ಆಜ್ಞೆ ನೀಡಿದೆ. ಅದನ್ನು ಪುರಸ್ಕರಿಸಿ ನಾವು ಕನ್ನಡ ಕಲಿಕೆಯನ್ನು ಸದ್ಯಕ್ಕೆ ತಡೆ ಹಿಡಿದಿದ್ದೇವಷ್ಟೆ ಎಂದು ತಿಳಿಸಿದರು.
ಹಾಗೆಯೇ ಹಂಪಿ ಕನ್ನಡ ವಿ.ವಿ.ಯಲ್ಲಿ ಕೋವಿಡ್ ಸಮಸ್ಯೆಯ ಹಿನ್ನೆಲೆಯಲ್ಲಿ ಪ್ರಸಾರಾಂಗ ಸ್ಥಗಿತವಾಗಿದೆ. ಇದರಿಂದಾಗಿ, ಅವರಿಗೆ ವರ್ಷಕ್ಕೆ ಬರುತ್ತಿದ್ದ 4 ಕೋಟಿ ರೂ.ಗಳಷ್ಟು ಆದಾಯ ನಿಂತುಹೋಗಿದೆ. ಆ ವಿ.ವಿ.ಗೆ ಅನುದಾನ ಕೊಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಏನನ್ನೇ ಮಾಡುವುದಕ್ಕೂ ಮೊದಲು ಆರ್ಥಿಕ ಪರಿಸ್ಥಿತಿಯನ್ನೂ ಅವಲೋಕಿಸಬೇಕಾಗುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಪ್ರಕ್ರಿಯೆಯ ಮುಂದಿನ ಹೆಜ್ಜೆಗಳನ್ನು ಇನ್ನು ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ವಿವರಿಸಿದರು.