ಫೆಬ್ರವರಿ 2-3ನೇ ವಾರದಲ್ಲಿ ಕೊರೋನಾ ಸೋಂಕು ಕಡಿಮೆಯಾಗಬಹುದು, ಅಲ್ಲಿಯವರೆಗೂ ಎಚ್ಚರದಿಂದಿರಿ: ಡಾ ಕೆ ಸುಧಾಕರ್
ಕೋವಿಡ್ -19 ಸೋಂಕಿನ ಮೂರನೇ ಅಲೆಯಲ್ಲಿ ಓಮಿಕ್ರಾನ್ ರೂಪಾಂತರಿ ಸೋಂಕಿನ ಲಕ್ಷಣ ಸೌಮ್ಯ ಪ್ರಮಾಣದಲ್ಲಿ ಮಧ್ಯಮ ಸ್ವರೂಪದಲ್ಲಿದೆ. ಜೀವಹಾನಿಯಾಗುವ ಸಂಭವ ತೀರಾ ಕಡಿಮೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಪುನರುಚ್ಛರಿಸಿದ್ದಾರೆ.
Published: 25th January 2022 11:10 AM | Last Updated: 25th January 2022 01:47 PM | A+A A-

ಡಾ ಕೆ ಸುಧಾಕರ್
ಬೆಂಗಳೂರು: ಕೋವಿಡ್ -19 ಸೋಂಕಿನ ಮೂರನೇ ಅಲೆಯಲ್ಲಿ ಓಮಿಕ್ರಾನ್ ರೂಪಾಂತರಿ ಸೋಂಕಿನ ಲಕ್ಷಣ ಸೌಮ್ಯ ಪ್ರಮಾಣದಲ್ಲಿ ಮಧ್ಯಮ ಸ್ವರೂಪದಲ್ಲಿದೆ. ಜೀವಹಾನಿಯಾಗುವ ಸಂಭವ ತೀರಾ ಕಡಿಮೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಪುನರುಚ್ಛರಿಸಿದ್ದಾರೆ.
ಈ ಕುರಿತು ಅಂಕಿಅಂಶ ಸಮೇತ ವಿವರಿಸಿದ ಅವರು, ರಾಜ್ಯದಲ್ಲಿ ಇದುವರೆಗೆ 5,230 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 3,442 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ, 1788 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ 3,62,487 ಸಕ್ರಿಯ ಕೇಸುಗಳಿವೆ. ಇಷ್ಟು ಸಕ್ರಿಯ ಕೇಸುಗಳಲ್ಲಿ ಆಸ್ಪತ್ರೆಯಲ್ಲಿರುವವರ ಸಂಖ್ಯೆ ಶೇಕಡಾ 2ಕ್ಕಿಂತ ಕಡಿಮೆಯಾಗಿದೆ. ಸೋಂಕಿನ ಲಕ್ಷಣ ಐದಾರು ದಿನಗಳ ಒಳಗೆ ಗುಣವಾಗುತ್ತಿತ್ತು ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ. ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: ಓಮಿಕ್ರಾನ್ ಕೊರೋನಾದ ಕೊನೆಯ ರೂಪಾಂತರಿಯಲ್ಲ; ಇನ್ನೂ ರೂಪಾಂತರಿಗಳು ಬರಬಹುದು: ಡಬ್ಲ್ಯೂಎಚ್ಒ ಎಚ್ಚರಿಕೆ
ಮೂರನೇ ಅಲೆ ಫೆಬ್ರವರಿ 2 ಅಥವಾ ಮೂರನೇ ವಾರದಲ್ಲಿ ಕಡಿಮೆಯಾಗಬಹುದು ಎಂದು WHO-ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಸಿಎಂಆರ್ (ICMR) ಕೂಡ ಹೇಳಿದೆ. ಅದೇ ದಾರಿಯಲ್ಲಿ ಸಾಗುವ ಲಕ್ಷಣ ಕಾಣುತ್ತಿದ್ದು, ಇನ್ನೆರಡು ಮೂರು ವಾರ ಹೆಚ್ಚು ಎಚ್ಚರಿಕೆಯಿಂದ ಇದ್ದರೆ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಬಹುದು ಎಂದರು.
ಮೂರನೇ ಅಲೆ ತಗ್ಗಿದ ನಂತರ ಐಸಿಎಂಆರ್, ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ನೀಡಲಿದ್ದು ಅದರಂತೆ ನಾವು ಮುಂದುವರಿಯೋಣ, ಕೊರೋನಾ ಎರಡು ಡೋಸ್, ಮೂರನೇ ಬೂಸ್ಟರ್ ಡೋಸ್ ಪಡೆದಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇನ್ನಷ್ಟು ಕೊರೋನಾ ರೂಪಾಂತರಿ ಬಂದರೂ ಎದುರಿಸಬಹುದು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.