ಕೃಷಿ ಸಾಲ ನೀಡಿಕೆಯಲ್ಲಿ ಶೇ.68ರಷ್ಟು ಗುರಿ ಸಾಧನೆ: ಸಚಿವ ಎಸ್.ಟಿ. ಸೋಮಶೇಖರ್
ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ 30.86 ಲಕ್ಷ ರೈತರಿಗೆ ಸಹಕಾರ ಸಂಘಗಳ ಮೂಲಕ 20,810 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಿದ್ದು, ಇದುವರೆಗೂ ಶೇ.68.18ರಷ್ಟು ಗುರಿ ಸಾಧಿಸಲಾಗಿದೆ...
Published: 25th January 2022 12:02 PM | Last Updated: 25th January 2022 01:48 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ 30.86 ಲಕ್ಷ ರೈತರಿಗೆ ಸಹಕಾರ ಸಂಘಗಳ ಮೂಲಕ 20,810 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಿದ್ದು, ಇದುವರೆಗೂ ಶೇ.68.18ರಷ್ಟು ಗುರಿ ಸಾಧಿಸಲಾಗಿದೆ. ಮುಂದಿನ ಮಾರ್ಚ್ ವೇಳೆಗೆ ಇನ್ನಷ್ಟು ಪ್ರಗತಿ ಸಾಧಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಸೋಮವಾರ ಹೇಳಿದ್ದಾರೆ.
ಸೋಮವಾರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 31 ರವರೆಗೆ, ಇಲಾಖೆಯು ರಾಜ್ಯದ 19.58 ಕೋಟಿ ರೈತರಿಗೆ 14,188 ಕೋಟಿ ರೂ. ಸಣ್ಣ, ಮಧ್ಯಮ ಮತ್ತು ದೀರ್ಘಾವಧಿ ಸಾಲವನ್ನು ನೀಡಿದೆ, ಇದರೊಂದಿಗೆ ಶೇ.68.18 ರಷ್ಟು ಗುರಿ ಸಾಧಿಸಿದೆ. ಇನ್ನುಳಿದ ಗುರಿಯನ್ನು ಮುಂದಿನ ಮೂರು ತಿಂಗಳಲ್ಲಿ ಸಾಧಿಸಲು ಸಂಬಂಧಪಟ್ಟ ಡಿಸಿಸಿ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ಗಳು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಲ್ಪಾವಧಿ ಮತ್ತು ಮಧ್ಯಮ ಅವಧಿಯ ಸಾಲ ವಸೂಲಾತಿ ಕ್ರಮವಾಗಿ ಶೇ.94.93 ಮತ್ತು ಶೇ.76.29 ರಷ್ಟಿದೆ. 19,196 ಸ್ವಸಹಾಯ ಗುಂಪುಗಳಿಗೆ (ಎಸ್ಎಚ್ಜಿ) 689 ಕೋಟಿ ಸಾಲವನ್ನು ನೀಡಲಾಗಿದೆ ಮತ್ತು ಸರ್ಕಾರದ ಉಪಕ್ರಮದಿಂದ ಹೆಚ್ಚಿನ ಸ್ವಸಹಾಯ ಗುಂಪುಗಳು ಪ್ರಯೋಜನ ಪಡೆಯುವಂತೆ ಮಾಡಲು ಡಿಸಿಸಿ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.