ದಿಗ್ಗಜರು ಸಿನಿಮಾ ದೃಶ್ಯದಂತಹ ಘಟನೆ: ರೈತನಿಗೆ ಅವಮಾನಿಸಿದ ಶೋ ರೂಂ; ಅರ್ಧಗಂಟೆಯಲ್ಲಿ 10 ಲಕ್ಷ ರೂ. ತಂದು ಕಾರು ನೀಡುವಂತೆ ಪಟ್ಟು!
ಕಾರು ಶೋ ರೂಂ ಸೇಲ್ಸ್ ಏಜೆಂಟ್ ಮಾಡಿದ ಅವಮಾನಕ್ಕೆ ಯುವ ರೈತ ತಕ್ಕ ಪಾಠ ಕಲಿಸಿದ್ದಾನೆ. 10 ಲಕ್ಷ ರೂ.ಗಳನ್ನು ತಂದು ಸಿಬ್ಬಂದಿ ಮುಂದಿಟ್ಟು ವಾಹನ ನೀಡುವಂತೆ ಪಟ್ಟು ಹಿಡಿದಿದ್ದಾರೆ
Published: 25th January 2022 09:06 AM | Last Updated: 25th January 2022 01:44 PM | A+A A-

ಸಾಂದರ್ಭಿಕ ಚಿತ್ರ
ತುಮಕೂರು: ಕಾರು ಶೋ ರೂಂ ಸೇಲ್ಸ್ ಏಜೆಂಟ್ ಮಾಡಿದ ಅವಮಾನಕ್ಕೆ ಯುವ ರೈತ ತಕ್ಕ ಪಾಠ ಕಲಿಸಿದ್ದಾನೆ. 10 ಲಕ್ಷ ರೂ.ಗಳನ್ನು ತಂದು ಸಿಬ್ಬಂದಿ ಮುಂದಿಟ್ಟು ವಾಹನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಯುವ ರೈತನ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಮಕೂರಿನ ರಾಮನಪಾಳ್ಯದಲ್ಲಿ ಈ ಘಟನೆ ನಡೆದಿದೆ. ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಕೆಂಪೇಗೌಡ ಎನ್ನುವ ಯುವ ರೈತ ಶೋ ರೂಂಗೆ ಬೋಲೆರೋ ಗೂಡ್ಸ್ ವಾಹನ ಖರೀದಿಗಾಗಿ ಆಗಮಿಸಿದ್ದರು. ಬೋಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ತಾಲೂಕಿನ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡಗೆ ಅವಮಾನ ಮಾಡಲಾಗಿದೆ.
ಶೋ ರೂಂ ಸೇಲ್ಸ್ ಏಜೆಂಟ್ ಸೇರಿದಂತೆ 7 ಜನರು ಕೆಂಪೇಗೌಡರ ಬಟ್ಟೆ ನೋಡಿ ತಮಾಷೆ ಮಾಡಿದ್ದಾರೆ. ನೀವು ವಾಹನ ತೆಗೆದುಕೊಂಡು ಹೋಗಲು ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ ಎಂದು ಅವಮಾನ ಮಾಡಿದ್ದಾರೆ. ಸುಮ್ಮನೆ ಶೋ ರೂಂಗೆ ಬಂದಿದ್ದೀರಿ ಎಂದು ಸುಮಾರು 25 ನಿಮಿಷಗಳ ಕಾಲ ಕಿಚಾಯಿಸಿದ್ದಾರೆ.
ನಮ್ಮನ್ನು ನೋಡಿ ಕೇವಲವಾಗಿ ಮಾತನಾಡಿದರು. 10 ರೂಪಾಯಿ ತರಲು ಯೋಗ್ಯತೆ ಇಲ್ಲ ಎಂದು ಅವಮಾನಿಸಿದರು. ಆಗ ನಾವು ಅರ್ಧಗಂಟೆಯಲ್ಲಿ 10 ಲಕ್ಷ ಹೊಂದಿಸಿ ತಂದು ಕೊಟ್ಟಿದ್ದೀವಿ. ಕಳೆದ ಜನವರಿ 4 ರಂದು ಶೋರೂಮ್ಗೆ ಹೋಗಿ ಗೂಡ್ಸ್ ವಾಹನ ತರಲು ಹೇಳಿಬರಲಾಗಿತ್ತು. ಅದರಂತೆ ಮೊನ್ನೆ ಎರಡು ಲಕ್ಷ ಹಣ ಕಟ್ಟಿ ವಾಹನ ತರಲು ಶೋರೂಮ್ಗೆ ಹೋಗಿದ್ದೆವು. ಎರಡು ಲಕ್ಷ ಹಣ ಕಟ್ತೀವಿ. ವಾಹನ ಕೊಡಿ ಎಂದು ಕೇಳಿದ್ದೀವಿ. ಆಗ ಶೋರೂಮ್ ಸಿಬ್ಬಂದಿ ಏಳು ಜನರು ಕೂಡ ‘ನೀವು ತಮಾಷೆ ಮಾಡಲು ಬಂದಿದ್ದೀರಾ. ವಾಹನ ತಗೊಂಡು ಹೋಗೊದಕ್ಕೆ ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ, ಸುಮ್ಮನೇ ಬಂದಿದ್ದೀರಾ’ ಎಂದು ಅವಮಾನ ಮಾಡಿದ್ದರು ಎಂದು ಕೆಂಪೇಗೌಡ ತಿಳಿಸಿದ್ದಾರೆ.
ಘಟನೆಯಿಂದ ಕುಪಿತಗೊಂಡ ಕೆಂಪೇಗೌಡ ಹಾಗೂ ಅವರ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿ ಕೂಡಲೇ ವಾಹನವನ್ನು ತಮಗೆ ನೀಡಬೇಕು ಇಲ್ಲದಿದ್ದರೇ ಅವಮಾನ ಮಾಡಿದ್ದಕ್ಕಾಗಿ ಲಿಖಿತವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಸ್ಥಳದಿಂದ ತೆರಳಲು ನಿರಾಕರಿಸಿದರು. ಪೊಲೀಸರು ಮನವೊಲಿಸಿದ ನಂತರ, ಶೋರೂಮಿನ ವಾಹನ ಬೇಡ ತಮಗೆ ಕ್ಷಮೆಯಾಚಿಸಬೇಕೆಂದು ಹೇಳಿ ಅವರು ಸ್ಥಳದಿಂದ ತೆರಳಿದರು.