ಜ.28ರಂದು ಆರೋಗ್ಯ ಇಲಾಖೆಯಿಂದ ವಿಷನ್ ವರದಿ ಬಿಡುಗಡೆ: ಡಾ.ಕೆ.ಸುಧಾಕರ್
ಜನವರಿ 28ಕ್ಕೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಆರು ತಿಂಗಳಾಗಲಿದ್ದು, ಈ ವೇಳೆ ಆರೋಗ್ಯ ಇಲಾಖೆ ಸಿದ್ಧಪಡಿಸಿರುವ ವಿಷನ್ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮಂಗಳವಾರ ಹೇಳಿದ್ದಾರೆ.
Published: 26th January 2022 11:40 AM | Last Updated: 26th January 2022 11:40 AM | A+A A-

ಸುಧಾಕರ್
ಬೆಂಗಳೂರು: ಜನವರಿ 28ಕ್ಕೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಆರು ತಿಂಗಳಾಗಲಿದ್ದು, ಈ ವೇಳೆ ಆರೋಗ್ಯ ಇಲಾಖೆ ಸಿದ್ಧಪಡಿಸಿರುವ ವಿಷನ್ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 28ಕ್ಕೆ ಸಿಎಂ ಅಧಿಕಾರ ಪಡೆದು 6 ತಿಂಗಳಾಗುತ್ತದೆ. ನಮ್ಮ ಆರೋಗ್ಯ ಇಲಾಖೆ ವಿಷನ್ ಡಾಕ್ಯುಮೆಂಟ್ ರೆಡಿ ಮಾಡುತ್ತಿದೆ. ಮುಂದಿನ 20 ವರ್ಷಗಳಲ್ಲಿ ಕರ್ನಾಟಕ ಹೇಗೆ ಸ್ವಾಸ್ಥ್ಯ ರಾಜ್ಯ ವಾಗಬೇಕು ಹಾಗೂ ಮೂರು ಹಂತಗಳ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಹೇಗಾಗಬೇಕೆಂದು ಆರೋಗ್ಯ ಇಲಾಖೆಯಿಂದ ವಿಷನ್ ವರದಿ ರೂಪಿಸಲಾಗುತ್ತಿದೆ. ಡಾ.ಗುರುರಾಜ್ ಅಧ್ಯಕ್ಷತೆಯಲ್ಲಿ ಟೀಂ ರಚನೆ ಮಾಡಲಾಗಿತ್ತು. ಸಮಿತಿ ಯಲ್ಲಿ 30 ಮಂದಿ ಹಿರಿಯ ತಜ್ಞರಿದ್ದು, 750 ಜನ ತಜ್ಞರು ವಿಷನ್ ಡಾಕ್ಯುಮೆಂಟ್‍ನಲ್ಲಿ ಕೆಲಸ ಮಾಡಿದ್ದಾರೆ. 28ಕ್ಕೆ ಮುಖ್ಯಮಂತ್ರಿಗಳು ಇದನ್ನು ಅನಾವರಣ ಮಾಡುತ್ತಾರೆ ಎಂದು ಹೇಳಿದ್ದಾರೆ.
ನಿನ್ನಯಷ್ಟೇ ಸುಧಾಕರ್ ಅವರು ರಾಷ್ಟ್ರೀಯ ಮಾನಸಿಕ ಆರೋಗ್ಯ ನರರೋಗ ವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್)ಯು ನೀತಿ ಆಯೋಗ ಹಾಗೂ ಆರೋಗ್ಯ ಇಲಾಖೆಯ ನೆರವಿನಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿರುವ ಮಾನಸಿಕ ರೋಗಿಗಳ ತಪಾಸಣೆ, ವೈದ್ಯರಿಗೆ ತರಬೇತಿ ನೀಡುವ ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಮಾನಸಿಕ ಆರೋಗ್ಯ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶ. ಮೆದುಳಿನ ಆರೋಗ್ಯ ಇಡೀ ದೇಹದ ಒಟ್ಟು ಆರೋಗ್ಯ ಕಾಪಾಡಲು ಅಗತ್ಯವಾಗಿದೆ. ನವಜಾತ ಶಿಶುವಿಗೂ ಮಾನಸಿಕ ಆರೋಗ್ಯದ ತಪಾಸಣೆ ಮಾಡಿ ರೋಗ ಪತ್ತೆ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿ ಹಲವು ಜಿಲ್ಲೆಗಳಲ್ಲಿ ನಿಮ್ಹಾನ್ಸ್ ನಿಂದ ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ದೇಶದಲ್ಲೇ ಮೊದಲ ಪ್ರಯತ್ನವಾಗಿದೆ. ಮಾನಸಿಕ ರೋಗಗಳ ತಪಾಸಣೆ ಮಾಡುವ ಜತೆಗೆ ಚಿಕಿತ್ಸೆ ನೀಡುವ ಕುರಿತು ಸ್ಥಳೀಯ ವೈದ್ಯರಿಗೆ ತರಬೇತಿ ನೀಡಲಾಗುತ್ತದೆ ರೋಗಿಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಈ ಪ್ರಯೋಗಿಕ ಕಾರ್ಯಕ್ರಮವನ್ನು ಜಾರಿ ಮಾಡಿ ವರದಿ ನೀಡಬೇಕು ಎಂದರು.