ಹಣಕ್ಕಾಗಿ ಚಿನ್ನದ ವ್ಯಾಪಾರಿ ಹತ್ಯೆಗೈದು ಕೆರೆಗೆ ಎಸೆದಿದ್ದವರ ಬಂಧನ!
ಚಿನ್ನಾಭರಣ ಗಿರವಿ ಇಡುವ ನೆಪದಲ್ಲಿ ಚಿನ್ನಾಭರಣ ಕಂಪನಿಯ ಸಿಬ್ಬಂದಿಯೋರ್ವನನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರ ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
Published: 27th January 2022 10:48 AM | Last Updated: 27th January 2022 12:02 PM | A+A A-

ಬಂಧಿತ ಆರೋಪಿಗಳು.
ಬೆಂಗಳೂರು: ಚಿನ್ನಾಭರಣ ಗಿರವಿ ಇಡುವ ನೆಪದಲ್ಲಿ ಚಿನ್ನಾಭರಣ ಕಂಪನಿಯ ಸಿಬ್ಬಂದಿಯೋರ್ವನನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರ ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ವ್ಯಕ್ತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿಗಳು, ನಂತರ ಶವವನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಿ ಮಾಗಡಿಯಲ್ಲಿರುವ ಕೆರೆಗೆ ಎಸೆದಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಿನ್ನೆ ತೆಂಗಿನಕಾಯಿ ಮಾರಾಟಗಾರ ಮಂಜುನಾಥ್ (28), ಬಾರ್'ನಲ್ಲಿ ಕೆಲಸ ಮಾಡುತ್ತಿದ್ದ ಮುನಿರಾಜು (24) ಎಂಬುವನ್ನು ಬಂಧನಕ್ಕೊಳಪಡಿಸಿದ್ದಾರೆ.
ಇದನ್ನೂ ಓದಿ: ಪಿಜಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಹಾಸನ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರೊಫೆಸರ್ ಅಮಾನತು
ಇಬ್ಬರೂ ತುಮಕೂರಿನ ಕುಣಿಗಲ್ ತಾಲೂಕಿನವರಾಗಿದ್ದು, ಸುಂಕದಕಟ್ಟೆಯ ಹೊಯ್ಸಳನಗರದಲ್ಲಿ ವಾಸವಾಗಿದ್ದಾರೆ.
ಬಿ ದಿವಾಕರ್ (29) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಬನಶಂಕರಿ 2ನೇ ಹಂತದ ಸೆರಬಂಡೆಪಾಳ್ಯ 3ನೇ ಮುಖ್ಯರಸ್ತೆಯ ನಿವಾಸಿ ದಿವಾಕರ್ ಎಸ್.ಎಸ್.ಆರ್.ಗೋಲ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣದ ಅವಶ್ಯಕತೆ ಇದ್ದಿದ್ದರಿಂದ ಆರೋಪಿಗಳು ಗೂಗಲ್ನಲ್ಲಿ ಹುಡುಕಿ ಎಸ್.ಎಸ್.ಆರ್.ಗೋಲ್ಡ್ ಕಂಪನಿಯ ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದರು. ಆ ಸಂಖ್ಯೆಗೆ ಕರೆಮಾಡಿದಾಗ ಸಿಬ್ಬಂದಿಯೊಬ್ಬರು ಆರೋಪಿಗಳಿಗೆ ದಿವಾಕರ್ ಅವರ ಮೊಬೈಲ್ ಸಂಖ್ಯೆ ನೀಡಿದ್ದರು.
ಇದೇ 19ರಂದು ದಿವಾಕರ್ಗೆ ಕರೆಮಾಡಿದ್ದ ಆರೋಪಿಗಳು ತಮ್ಮ ಬಳಿ 65 ರಿಂದ 70 ಗ್ರಾಂ ಚಿನ್ನವಿದೆ. ಹಣದ ಅವಶ್ಯಕತೆ ಇರುವುದರಿಂದ ಅದನ್ನು ಅಡವಿಡಲು ನಿರ್ಧರಿಸಿದ್ದೇವೆ. ನೀವು ಮನೆಗೆ ಬಂದು ಅದನ್ನು ಪಡೆದುಕೊಳ್ಳಿ ಎಂದಿದ್ದರು. ಅವರ ಮಾತು ನಂಬಿದ್ದ ದಿವಾಕರ್ ಜ.20ರಂದು ತನ್ನ ಪತ್ನಿಯನ್ನು ಜೆ.ಪಿ.ನಗರ 6ನೇ ಹಂತದಲ್ಲಿರುವ ಆದಿತ್ಯ ಗ್ಲೋಬಲ್ ಕಚೇರಿ ಬಳಿ ಬಿಟ್ಟು, ಬೈಕ್ನಲ್ಲಿ ಸುಂಕದಕಟ್ಟೆಗೆ ಹೋಗಿದ್ದರು.
ಇದನ್ನೂ ಓದಿ: ಆನ್ಲೈನ್ ಪ್ಲಾಟ್ ಮಾರಾಟದಲ್ಲಿ ವಂಚನೆ: ಬಿಡಿಎ ಸಿಬ್ಬಂದಿ, ಮಧ್ಯವರ್ತಿಗಳ ವಿರುದ್ಧ 14 ಎಫ್ ಐಆರ್ ದಾಖಲು
‘ದಿವಾಕರ್ ಮನೆಯೊಳಗೆ ಹೋಗುತ್ತಿದ್ದಂತೆ ಆರೋಪಿಗಳು ಕತ್ತು ಹಿಸುಕಿ ಕೊಲೆ ಮಾಡಿ ರೂ.3-4 ಲಕ್ಷ ಹಣ ಕಿತ್ತುಕೊಂಡಿದ್ದಾರೆ. ನಂತರ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ತುಂಬಿದ್ದಾರೆ. ಬೈಕ್ ಹಾಗೂ ಮೃತದೇಹವನ್ನು ಮಾಗಡಿ ರಸ್ತೆಯಲ್ಲಿರುವ ಹೊನ್ನಾಪುರ ಕೆರೆಯಲ್ಲಿ ಬಿಸಾಕಿದ್ದಾರೆ. ಈ ವಿಚಾರವನ್ನು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.
ಐಷಾರಾಮಿ ಬದುಕು ನಡೆಸಲು ಆರೋಪಿಗಳಿಗೆ ಹಣದ ಅವಶ್ಯಕತೆ ಇತ್ತು. ಹೀಗಾಗಿಯೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ವಿವರಿಸಿದ್ದಾರೆ.
ಕೆಲಸದ ಮೇರೆಗೆ ಹೊರಗೆ ಇರುವುದಾಗಿ ದಿವಾಕರ್ ತನ್ನ ತಾಯಿಗೆ ಹೇಳಿದ್ದಾರೆ. ನಂತರ ತಾಯಿ ಎಷ್ಟು ಬಾರಿ ಫೋನ್ ಮಾಡಿದರೂ ದಿವಾಕರ್ ಫೋನ್ ತೆಗೆದಿಲ್ಲ. ಗಾಬರಿಗೊಂಡ ಅವರು ಜನವರಿ 21 ರಂದು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ, ಜನವರಿ 20 ರಂದು ಹೊಯ್ಸಳ ನಗರದಲ್ಲಿ ದಿವಾಕರ್ ಅವರ ಫೋನ್ ಸ್ವಿಟ್ಚ್ ಆಫ್ ಆಗಿರುವುದು ತಿಳಿದುಬಂದಿದೆ. ಬಳಿಕ ಅವರ ಫೋನ್ ಡೀಟೆಲ್ಸ್ ಪರಿಶೀಲಿಸಿದ ಪೊಲೀಸರಿಗೆ ಆರೋಪಿಗಳು ಪದೇ ಪದೇ ಫೋನ್ ಮಾಡಿರುವುದು ತಿಳಿದುಬಂದಿದೆ. ಇದರಂತೆ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.