ಬೆಲೆ ಬಾಳುವ ಮೈಸೂರು ಸಿಲ್ಕ್ ಸೀರೆಗೆ ಬೆಂಕಿ ತಗುಲಿ ಹಾನಿ: ಮಾಜಿ ನ್ಯಾಯಾಧೀಶರ ಪತ್ನಿಗೆ ಪರಿಹಾರ ನೀಡಲು ನ್ಯಾಯಲಯ ಸೂಚನೆ!
ಸೀರೆ ಬಾರ್ಡರ್ ಹೊಲಿಯಲೆಂದು ತೆಗೆದುಕೊಂಡಿದ್ದ ದುಬಾರಿ ಬೆಲೆಯ ಮೈಸೂರು ಸಿಲ್ಕ್ ಸೀರೆಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಹಾನಿ ಮತ್ತು ವ್ಯಾಜ್ಯದ ವೆಚ್ಚವನ್ನು ಭರಿಸುವಂತೆ ಅಂಗಡಿ ಮಾಲೀಕರಿಗೆ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿರುವ ಘಟನೆಯೊಂದು ನಡೆದಿದೆ.
Published: 27th January 2022 02:23 PM | Last Updated: 27th January 2022 03:03 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಸೀರೆ ಬಾರ್ಡರ್ ಹೊಲಿಯಲೆಂದು ತೆಗೆದುಕೊಂಡಿದ್ದ ದುಬಾರಿ ಬೆಲೆಯ ಮೈಸೂರು ಸಿಲ್ಕ್ ಸೀರೆಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಹಾನಿ ಮತ್ತು ವ್ಯಾಜ್ಯದ ವೆಚ್ಚವನ್ನು ಭರಿಸುವಂತೆ ಅಂಗಡಿ ಮಾಲೀಕರಿಗೆ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿರುವ ಘಟನೆಯೊಂದು ನಡೆದಿದೆ.
ಬಾರ್ಡರ್ ಹೊಲಿಯಲು ನೀಡಲಾದ ಸೀರೆಯನ್ನು ಹಾನಿಗೊಳಿಸಿದ್ದಕ್ಕಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಪತ್ನಿಗೆ ಪರಿಹಾರ ನೀಡುವಂತೆ ಅಂಗಡಿ ಮಾಲೀಕರಿಗ ಆಯೋಗ ಸೂಚಿಸಿದೆ.
ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಸ್. ಈವಾನಿ ಮತ್ತು ಅವರ ಪತ್ನಿ ಮಂಗಳಾ ಅವರಿಗೆ ಸೀರೆಯ ಬೆಲೆ ರೂ. 21,975, ಹಾನಿಗೊಳಿಸಿದ್ದಕ್ಕೆ ರೂ.5000, ಹಾಗೂ ದಾವೆ ವೆಚ್ಚ ರೂ.5000 ಸೇರಿದಂತೆ ಒಟ್ಟು 31,975 ಪಾವತಿ ಮಾಡುವಂತೆ ಆಯೋಗವು ದಿವೇನ ಕೌಚರ್' ನ ಎನ್.ಸಿ.ದಿವ್ಯಾ ಅವರಿಗೆ ಸೂಚನೆ ನೀಡಿದೆ.
ವಿಚಾರಣೆ ವೇಳೆ ನ್ಯಾಯಧೀಶರ ಪತ್ನಿ 2019ರ ಆಗಸ್ಟ್ ತಿಂಗಳಿನಲ್ಲಿ ಸೀರೆ ಖರೀದಿ ಮಾಡಿದ್ದ ರೂ.21,975 ರಶೀದಿ, ಹಾಗೂ 2019ರ ಅಕ್ಟೋಬರ್ ತಿಂಗಳಿನಲ್ಲಿ ಸೀರೆಯ ಬಾರ್ಡರ್ ಹೊಲಿಯಲು ಹಾಕಿದ್ದ ರಶೀದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಆದರೆ, ದಿವ್ಯಾ ಅವರು ದೂರುದಾರರಿಂದ ರೇಷ್ಮೆ ಸೀರೆ ಪಡೆದುಕೊಂಡಿದ್ದು, ಬಿಡುವಿಲ್ಲದ ಕಾರಣ ಅದನ್ನು ತೆರೆಯದೆ ಬೇರೆ ಬಟ್ಟೆಯೊಂದಿಗೆ ಇಡಲಾಗಿತ್ತು. ಹೊಲಿಯಲು ತೆಗೆದಾಗ ಸೀರೆಯಲ್ಲಿ ಬೆಂಕಿ ಬಿದ್ದಿರುವ ಚುಕ್ಕೆಗಳು ಕಂಡು ಬಂದಿತ್ತು. ಕೂಡಲೇ ಸಿಬ್ಬಂದಿಗಳು ಮಂಗಳಾ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಹೇಳಿದರು.
ಈ ವೇಳೆ ಆಯೋಗವು ಹೊಲಿಯಲು ಸ್ವೀಕರಿಸಿದ ವಸ್ತುಗಳ ಸ್ಥಿತಿಯನ್ನು ಪರಿಶೀಲಿಸುವುದು ದಿವ್ಯಾ ಅವರ ಕರ್ತವ್ಯವಾಗಿತ್ತು. ಆ ಸಮಯದಲ್ಲಿ ಹಾನಿಯ ಬಗ್ಗೆ ಗಮನ ಹರಿಸದಿರುವುದು ನಿಮ್ಮ ಕಡೆಯಿಂದ ಆಗಿರುವ ನಿರ್ಲಕ್ಷ್ಯವಾಗಿದೆ ಎಂದು ಹೇಳಿದೆ. ಅಲ್ಲದೆ, ಮಂಗಳಾ ಅವರಿಗೆ ಸೀರೆಯ ವೆಚ್ಚ, ಹಾನಿಯಾಗಿರುವುದು ಹಾಗೂ ದಾವೆಯ ವೆಚ್ಚ ಪಾವತಿ ಮಾಡುವಂತೆ ಸೂಚಿಸಿದೆ.
ಎರಡು ಕಡೆ ಸೀರೆ ಸುಡಲಾಗಿದೆ: ಆಯೋಗ
ಬಾರ್ಡರ್ ಹೊಲಿಗೆಗೆ ನೀಡಿದಾಗ ಅದಾಗಲೇ ಸೀರೆಯನ್ನು ಬಳಕೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ದಿವ್ಯಾ ಅವರು ಹೇಳಿದರು. ಈ ವೇಳೆ ಆಯೋಗವು ಸೀರೆಯನ್ನು ಆಗಸ್ಟ್ 18, 2019 ರಂದು ಖರೀದಿಸಿ 2019 ರ ಅಕ್ಟೋಬರ್ 29 ರಂದು ಬಾರ್ಡರ್ ಹೊಲಿಯಲು ನೀಡಲಾಗಿದೆ. ಎರಡೂವರೆ ತಿಂಗಳ ಅಂತರದಲ್ಲಿ ಸೀರೆಯನ್ನು ನೀಡಲಾಗಿದೆ. ಸೀರೆ ದುಬಾರಿ ಬೆಲೆ ಹಾಗೂ ಬ್ರಾಂಡೆಡ್ ಸೀರೆಯಾಗಿದ್ದು, ಎರಡು ಸ್ಥಳಗಳಲ್ಲಿ ಸೀರೆ ಸುಟ್ಟಿದ್ದರೆ, ಅದನ್ನು ಧರಿಸಲಾಗುವುದಿಲ್ಲ ಮತ್ತು ಅದು ನಿಷ್ಪ್ರಯೋಜಕವಾಗಿರುತ್ತದೆ. ಹೀಗಾಗಿ ದೂರುದಾರರಿಗೆ ಪರಿಹಾರ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್ ಮತ್ತು ಸದಸ್ಯೆ ಎಸ್.ಎಂ.ಶರಾವತಿ ಅವರು ಆದೇಶಿಸಿದರು.