ಗಮಕ ಗಂಧರ್ವ ಕೇಶವಮೂರ್ತಿಗೆ ಪದ್ಮಶ್ರೀ ಗೌರವ: ಹೊಸಹಳ್ಳಿಯಲ್ಲಿ ಮನೆ ಮಾಡಿದ ಸಂಭ್ರಮ!
ಖ್ಯಾತ ಗಮಕ ಕಲಾವಿದರಾದ ಹೆಚ್.ಆರ್.ಕೇಶವಮೂರ್ತಿಯವರು ಭಾರತ ಸರ್ಕಾರ ಕೊಡಮಾಡುವ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ಕೇಶವಮೂರ್ತಿಯವರ ಈ ಸಾಧನೆಯನ್ನು ಇಡೀ ಜಿಲ್ಲೆ ಕೊಂಡಾಡುತ್ತಿದೆ.
Published: 27th January 2022 01:24 PM | Last Updated: 27th January 2022 02:00 PM | A+A A-

ಸಚಿವ ಕೆಸಿ ನಾರಾಯಣ ಗೌಡ ಹಾಗೂ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, ಎಂಎಲ್'ಸಿ ಡಿಎಸ್ ಅರುಣ್ ಅವರು ಕೇಶವಮೂರ್ತಿಯವರ ನಿವಾಸಕ್ಕೆ ಭೇಟಿ ನೀಡಿರುವುದು.
ಶಿವಮೊಗ್ಗ: ಖ್ಯಾತ ಗಮಕ ಕಲಾವಿದರಾದ ಹೆಚ್.ಆರ್.ಕೇಶವಮೂರ್ತಿಯವರು ಭಾರತ ಸರ್ಕಾರ ಕೊಡಮಾಡುವ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ಕೇಶವಮೂರ್ತಿಯವರ ಈ ಸಾಧನೆಯನ್ನು ಇಡೀ ಜಿಲ್ಲೆ ಕೊಂಡಾಡುತ್ತಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಕೆಸಿ ನಾರಾಯಣ ಗೌಡ ಹಾಗೂ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, ಎಂಎಲ್'ಸಿ ಡಿಎಸ್ ಅರುಣ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಕೇಶವಮೂರ್ತಿಯವರ ಮನೆಗೆ ತೆರಳಿ ಗೌರವಿಸಿದ್ದು, ಅವರ ಗಮಕ ಗಾಯನ ಕೇಳಿ ಮೂಕ ವಿಸ್ಮಿತರಾದರು.
ಪದ್ಮಶ್ರೀ ಗೌರವ ಕುರಿತು ಪ್ರತಿಕ್ರಿಯೆ ನೀಡಿರುವ ಕೇಶವಮೂರ್ತಿಯವರು, ಪ್ರಶಸ್ತಿಯ ಸುದ್ದಿ ನನಗೆ ಆಶ್ಚರ್ಯ ತಂದಿದೆ, ಬಹಳ ಸಂತೋಷವಾಗುತ್ತಿದೆ. ಗಮಕ ಕಲೆಯನ್ನು ರಕ್ಷಿಸಬೇಕಾಗಿದ್ದು, ಹೆಚ್ಚಿನ ಜನರು ಈ ಕಲೆಯನ್ನು ಕಲಿಯಲು ಆಸಕ್ತಿ ವಹಿಸಿದರೆ ಮತ್ತು ಹೆಚ್ಚಿನ ಜನರು ಈ ಕಲೆಯನ್ನು ಮೆಚ್ಚಿದರೆ, ಅದು ಮತ್ತಷ್ಟು ಬೆಳೆಯುತ್ತದೆ. ಈ ಕಲಾಪ್ರಕಾರ ಮತ್ತಷ್ಟು ಬೆಳೆಯಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.
ಬಿ.ವೈ ರಾಘವೇಂದ್ರ ಅವರು ಮಾತನಾಡಿ, ಪ್ರಶಸ್ತಿಯು ಗಮಕ ಕಲೆಗೆ ಸಂದ ಗೌರವವಾಗಿದೆ. ಹಳ್ಳಿಯಲ್ಲಿರುವ ಗಮಕ ಭವನದ ಮೇಲೆ ಇಟ್ಟ ಚಿನ್ನದ ಗರಿ ಇದಾಗಿದೆ. ಕಲಾಭಿಮಾನಿಗಳು ಸಂಭ್ರಮಿಸುವ ಸಂದರ್ಭವಿದು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘ಆಧುನಿಕ ಭಗೀರಥ’ ಮಹಾಲಿಂಗ ನಾಯ್ಕ ಅವರಿಗೆ ಕೃಷಿ ಕ್ಷೇತ್ರದ ಸಾಧನೆಗೆ ಪದ್ಮ ಪ್ರಶಸ್ತಿ
ಫೆಬ್ರವರಿ 22, 1934 ರಂದು ಜನಿಸಿದ ಕೇಶವಮೂರ್ತಿಯವರು ಗಮಕದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಅವರ ಕೊಡುಗೆ ಅಪಾರ ಮತ್ತು ಅನನ್ಯವಾಗಿದೆ. ವಾರಣಾಸಿ, ಕಾನ್ಪುರ, ಜೈಪುರ, ಮುಂಬೈ, ಪುನಾ ಘರಾಣೆಗಳಂತೆಯೇ ಕೇಶವಮೂರ್ತಿಯವರ ಶೈಲಿ ಕೂಡ ಖ್ಯಾತಿಪಡೆದುಕೊಂಡಿದೆ. ಕೇಶವಮೂರ್ತಿಯವರ ಈ ಕಲೆಗೆ ಸಾವಿರಾರು ಮಂದಿ ಅಭಿಮಾನಿಗಳಿದ್ದಾರೆ.
ಶಿವಮೊಗ್ಗ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ ಕೇಶವಮೂರ್ತಿ ಅವರದ್ದು ಕೃಷಿಕ ಮನೆತನ. ತಂದೆ ರಾಮಸ್ವಾಾಮಿ ಶಾಸ್ತ್ರಿಗಳು ಸಂಸ್ಕೃತ ವಿದ್ವಾಂಸರು, ಜೊತೆಗೆ ಗಾಯಕರು. ತಾಯಿ ಲಕ್ಷ್ಮೀದೇವಮ್ಮ, ಇವರ ಸೋದರ ರಾಮಾಶಾಸ್ತ್ರಿಗಳು ಗಮಕ ಹಾಗೂ ಸಂಗೀತ ವಿದ್ವಾಂಸರು. ಇದೇ ಇವರಿಗೆ ಪ್ರೇರಣೆಯಾಗಿದೆ. ಇವರ ಸಾಧನೆಯನ್ನು ಇದೀಗ ಇಡೀ ಗ್ರಾಮವೇ ಕೊಂಡಾಡುತ್ತಿದ್ದು, ಇವರ ಕಲೆ, ಸಾಧನೆಯಿಂದಾಗಿ ಇದೀಗ ಹೊಸಹಳ್ಳಿಯು ಗಮಕ ಗ್ರಾಮ ಎಂಬ ಹೆಸರನ್ನು ತಂದುಕೊಟ್ಟಿದೆ.
ಕೇಶವಮೂರ್ತಿಗಳು ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ. ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿಯವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ. ಹೆಗ್ಗೋಡು, ಮತ್ತೂರು, ಶಿವಮೊಗ್ಗ, ಮೈಸೂರು, ಬೆಂಗಳೂರು, ಗದಗ ಹಾಗೂ ಹೊರ ರಾಜ್ಯಗಳಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಗಮಕ ತರಗತಿಗಳನ್ನು ನಡೆಸಿ, ಮತ್ತೂರು ಶಿವಮೊಗ್ಗ ಮುಂತಾದೆಡೆ ನೂರಾರು ವಿದ್ಯಾರ್ಥಿಗಳಿಗೆ ಗಮಕ ಶಿಕ್ಷಣ ನೀಡಿದ ಹಿರಿಮೆ ಕೇಶವಮೂರ್ತಿ ಅವರದ್ದಾಗಿದೆ.