ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮ: ಸಚಿವ ಸುಧಾಕರ್
ನೀತಿ ಆಯೋಗದ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
Published: 27th January 2022 11:53 AM | Last Updated: 27th January 2022 12:04 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ನೀತಿ ಆಯೋಗದ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 9 ಕೋಟಿ ವೆಚ್ಚದಲ್ಲಿ 25,000 ಚದರ ಅಡಿ ವಿಸ್ತೀರ್ಣದಲ್ಲಿ 24/7 ಆರೋಗ್ಯ ಸೌಲಭ್ಯ, 12 ಹಾಸಿಗೆಗಳು, ಮೂವರು ವೈದ್ಯರು, ನರ್ಸ್‌ಗಳು, ತಂತ್ರಜ್ಞರು ಮತ್ತು ಗ್ರೂಪ್ ಡಿ ನೌಕರರು ಕ್ವಾರ್ಟರ್ಸ್ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸುಧಾಕರ್ ಅವರು, ರಾಜ್ಯದಲ್ಲಿ 6 ಜಿಲ್ಲೆಗಳಲ್ಲಿ ಅಪೌಷ್ಠಿಕತೆ ಹೆಚ್ಚಿದೆ. ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಧಾರವಾಡದಲ್ಲಿ ಅಪೌಷ್ಠಿಕತೆ ಹೆಚ್ಚಾಗಿದ್ದು, ವಿಶೇಷ ಒತ್ತು ನೀಡಿ ಅಪೌಷ್ಠಿಕತೆ ನಿವಾರಣೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಅಲ್ಲದೆ, 250 ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) ವಿಶ್ವದರ್ಜೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಜ.28ರಂದು ಆರೋಗ್ಯ ಇಲಾಖೆಯಿಂದ ವಿಷನ್ ವರದಿ ಬಿಡುಗಡೆ: ಡಾ.ಕೆ.ಸುಧಾಕರ್
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಮಂಡಿಕಲ್, ಪೆರೇಸಂದ್ರ ಮತ್ತು ದಿಬ್ಬೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಪಡಿಸಲು ರೂ. 30 ಕೋಟಿ ಮೀಸಲಿಟ್ಟಿದೆ. ಚಿಕ್ಕಬಳ್ಳಾಪುರದಲ್ಲಿ 700 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಸ ಜಿಲ್ಲಾಸ್ಪತ್ರೆ ನಿರ್ಮಾಣವಾಗಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಸ್ಥಳದ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಹಾಗೆಯೇ ಜಿಲ್ಲಾಡಳಿತ ಕಚೇರಿ ಎಲ್ಲಿರಬೇಕೆಂದು ಜನಪ್ರತಿನಿಧಿಗಳ ಸಹಮತದೊಂದಿಗೆ ತೀರ್ಮಾನಿಸಲಾಗುವುದು. ಈ ಭಾಗದಲ್ಲಿ ಯುವಜನರಿಗೆ ಉದ್ಯೋಗ ನೀಡಲು ಕೈಗಾರಿಕೆ ಆರಂಭಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಕೋವಿಡ್ ಪ್ರಕರಣಗಳ ಪ್ರಮಾಣ ಬೆಂಗಳೂರಿನಲ್ಲಿ ಇಳಿಕೆಯಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ನಿಧಾನವಾಗಿ ಏರುತ್ತಿದೆ. ಆದರೆ ಆಸ್ಪತ್ರೆ ದಾಖಲಾತಿ ಶೇ.2 ಮಾತ್ರ ಇರುವುದರಿಂದ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಇಲ್ಲ. ಓಮಿಕ್ರಾನ್ ವೈರಾಣು ಇದ್ದರೂ ರೋಗ ತೀವ್ರತೆ ಇಲ್ಲ. ಕಳೆದೆರಡು ಅಲೆಗಳಿಗೆ ಹೋಲಿಸಿದರೆ ಈ ಅಲೆಯಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ ಇದೆ. ಹಾಗೆಯೇ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುವವರ ಪ್ರಮಾಣ ಅಧಿಕವಾಗಿದೆ. ಪ್ರಕರಣ ಕಡಿಮೆಯಾಗುತ್ತಿರುವಾಗ ಅತಿ ಕಠಿಣ ನಿಯಮಗಳ ಅಗತ್ಯವಿಲ್ಲ ಎಂದರು.
ಇದನ್ನೂ ಓದಿ: ಫೆಬ್ರವರಿ 2-3ನೇ ವಾರದಲ್ಲಿ ಕೊರೋನಾ ಸೋಂಕು ಕಡಿಮೆಯಾಗಬಹುದು, ಅಲ್ಲಿಯವರೆಗೂ ಎಚ್ಚರದಿಂದಿರಿ: ಡಾ ಕೆ ಸುಧಾಕರ್