ಇಂದು ಮಧ್ಯಾಹ್ನ ಕೇಂದ್ರ ಆರೋಗ್ಯ ಸಚಿವರ ಜೊತೆ ಕೋವಿಡ್ ಸಭೆ, ಮುಂದಿನ ಕ್ರಮಗಳ ಕುರಿತು ಚರ್ಚೆ: ಡಾ ಕೆ ಸುಧಾಕರ್
ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿಯವರು ಕೇವಲ ಆರು ತಿಂಗಳಲ್ಲಿ ರಾಜ್ಯದ ಆರೂವರೆ ಕೋಟಿ ಜನರ ಪ್ರೀತಿ, ವಿಶ್ವಾಸ, ಜನಪ್ರಿಯತೆ ಗಳಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಕೈಮೀರಿ ಕೆಲಸ ಮಾಡಿ ಸರ್ವಾಂಗೀಣ ಅಭಿವೃದ್ಧಿಗೆ, ಆಡಳಿತಕ್ಕೆ ವಿಶೇಷ ಚುರುಕು ಮುಟ್ಟಿಸಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶೇಷ ಗಮನ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಶ್ಲಾಘ
Published: 28th January 2022 11:54 AM | Last Updated: 28th January 2022 01:35 PM | A+A A-

ಡಾ ಕೆ ಸುಧಾಕರ್
ಬೆಂಗಳೂರು: ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿಯವರು ಕೇವಲ ಆರು ತಿಂಗಳಲ್ಲಿ ರಾಜ್ಯದ ಆರೂವರೆ ಕೋಟಿ ಜನರ ಪ್ರೀತಿ, ವಿಶ್ವಾಸ, ಜನಪ್ರಿಯತೆ ಗಳಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಕೈಮೀರಿ ಕೆಲಸ ಮಾಡಿ ಸರ್ವಾಂಗೀಣ ಅಭಿವೃದ್ಧಿಗೆ, ಆಡಳಿತಕ್ಕೆ ವಿಶೇಷ ಚುರುಕು ಮುಟ್ಟಿಸಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶೇಷ ಗಮನ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಟ್ಟಿರುವ ಹಾದಿಯನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ಶಿರಸಾ ಪಾಲಿಸುತ್ತಿದ್ದು ಇದರಿಂದ ಕರ್ನಾಟಕದಲ್ಲಿ ಹೊಸ ಆಡಳಿತ ಮತ್ತು ರಾಜಕೀಯ ಶಕೆ ಆರಂಭವಾಗಿದೆ, ಮುಂದಿನ ದಿನಗಳಲ್ಲಿ ಬಿಜೆಪಿಗೆ ಉತ್ತಮ ಅವಕಾಶಗಳಿದ್ದು, 2023ರಲ್ಲಿ ಬೊಮ್ಮಾಯಿಯವರ ನಾಯಕತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.
ಬಸವರಾಜ ಬೊಮ್ಮಾಯಿಯವರ ಹುಟ್ಟುಹಬ್ಬ ಮಾತ್ರವಲ್ಲದೆ ಕಳೆದ ಆರು ತಿಂಗಳ ಆಡಳಿತ ಸಾಧನೆಯ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಕಿರುಹೊತ್ತಿಗೆ ಕೂಡ ಬಿಡುಗಡೆಯಾಗುತ್ತಿದೆ. ಸರ್ಕಾರದ ರಿಪೋರ್ಟ್ ಕಾರ್ಡು ಕೂಡ ರಾಜ್ಯದ ಜನತೆ ಮುಂದೆ ಬಿಡುಗಡೆಯಾಗುತ್ತಿದೆ ಎಂದರು.
ಸಿದ್ದರಾಮಯ್ಯನವರು 5 ವರ್ಷಗಳು ಸಿಎಂ ಆಗಿದ್ದರೂ ಟೇಕಾಫ್ ಆಗಿರಲಿಲ್ಲ: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಕೂಡ ಭಾಗಿಯಾಗಿದ್ದೆ. ಆಗಲೂ ಅನೇಕರು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ 5 ವರ್ಷಗಳಾದರೂ ಇನ್ನೂ ಟೇಕಾಫ್ ಆಗಿಲ್ಲ ಎನ್ನುತ್ತಿದ್ದರು. ಸ್ವತಃ ಸಿದ್ದರಾಮಯ್ಯನವರೇ ಅನೇಕ ಭಾಷಣಗಳಲ್ಲಿ ಇದನ್ನು ಪ್ರಸ್ತಾಪಿಸಿದ್ದರು ಎಂದರು.
ಅಭಿವೃದ್ಧಿ ವಿಷಯದಲ್ಲಿ ಬೊಮ್ಮಾಯಿ ಸರ್ಕಾರ ರಾಜಿಯಾಗಿಲ್ಲ. ಗುರುತರವಾದ ಅಭಿವೃದ್ಧಿ ಎಲ್ಲ ಇಲಾಖೆಯಲ್ಲಿ ಆಗಿದೆ. ಮಾಡಿರುವ ಕೆಲಸದ ಗುರುತರ ವರದಿಯನ್ನು ಸರ್ಕಾರ ಇಂದು ಹೊರಗೆ ತರುತ್ತಿದೆ. ಅದರಲ್ಲಿ ಒಂದು ಸುಳ್ಳಾದರೂ ಇದ್ದರೆ ಸಾಬೀತುಪಡಿಸಲಿ ಎಂದು ಡಾ ಸುಧಾಕರ್ ಸವಾಲು ಹಾಕಿದರು.
ಮುಂದಿನ ದಿನಗಳಲ್ಲಿ ಕೋವಿಡ್ ಸ್ಥಿತಿಗತಿಗಳನ್ನು ಅಧ್ಯಯನ ಮಾಡುತ್ತಿರುತ್ತೇವೆ. ಇಂದು ಮಧ್ಯಾಹ್ನ 2.30ಕ್ಕೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಜೊತೆ ಸಭೆ ನಿಗದಿಯಾಗಿದೆ. ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿನ ಸ್ಥಿತಿಗತಿ, ನಿಯಂತ್ರಣ ಮಾಡುವ ಕುರಿತು ಅವಲೋಕಿಸಿ ಕಾಲ ಕಾಲಕ್ಕೆ ತೀರ್ಮಾನ ಮಾಡುತ್ತೇವೆ ಎಂದರು.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಕೂಡ ಸೌಮ್ಯ ರೂಪದಲ್ಲಿದೆ. ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ದಾಖಲಾಗಿದ್ದಾರೆ ಎಂಬುದು ಮುಖ್ಯವಾಗಿದ್ದು, ತರುವಂತಹ ವ್ಯಾಧಿಗೆ ತಕ್ಕಂತೆ ನಮ್ಮ ಕ್ರಮಗಳಿರುತ್ತವೆ. ಡೆಲ್ಟಾ ರೂಪಾಂತರಿಗಿಂತ ಈಗ 5-6 ಪಟ್ಟು ಹೆಚ್ಚು ಪಾಸಿಟಿವ್ ಪ್ರಕರಣಗಳಿವೆ. ಗುಣಲಕ್ಷಣಗಳು ಮೃದುವಾಗಿದೆ. ರೋಗಲಕ್ಷಣಗಳು ಐದಾರು ದಿವಸಗಳಲ್ಲಿ ಕಡಿಮೆಯಾಗುತ್ತಿದೆ. ಐಸಿಎಂಆರ್(ICMR) ಮಾರ್ಗಸೂಚಿ ಪ್ರಕಾರ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.