ಬೆಂಗಳೂರು: ಐಟಿ ಸೋಗಿನಲ್ಲಿ ದರೋಡೆ, ಐವರ ಸೆರೆ
ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ, ನಗದು, ಪಿಸ್ತೂಲ್ ನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.7 ಲಕ್ಷ ನಗದು, ಕಾರು ಹಾಗೂ ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
Published: 28th January 2022 05:03 PM | Last Updated: 28th January 2022 05:08 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ, ನಗದು, ಪಿಸ್ತೂಲ್ ನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.7 ಲಕ್ಷ ನಗದು, ಕಾರು ಹಾಗೂ ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಜಯನಗರದ ಮಂಜುನಾಥ್, ಮಹಮ್ಮದ್ ಶೋಯಬ್ ರಬ್ಬಾನಿ ಅಲಿಯಾಸ್ ಪಾಕರ್ ಅಲಿ, ಪ್ರಶಾಂತ್ ಕುಮಾರ್, ದುರ್ಗೇಶ ಹಾಗೂ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ವಸಂತರಾವ್ ಪಾಟೀಲ್ ತಿಳಿಸಿದ್ದಾರೆ.
ಕಳೆದ ಜನವರಿ 23 ರಂದು ಬೆಳಗ್ಗೆ 8.45ರ ವೇಳೆ ಸಂಜಯನಗರದ ಮನೆಯೊಂದಕ್ಕೆ ಬಂದ ಬಂಧಿತರಲ್ಲಿ ಇಬ್ಬರು, ನಾವು ಆದಾಯ ತೆರಿಗೆ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದು, ಮನೆ ಪರಿಶೀಲಿಸಬೇಕೆಂದು ಹೇಳಿ, ವಾರ್ಡ್ ರೂಬ್ ನ ಲಾಕರ್ ನಲ್ಲಿದ್ದ 3.5 ಲಕ್ಷ ರೂ ನಗದು ಹಾಗೂ ಒಂದು ಪಿಸ್ತೂಲ್ ನ್ನು ತೆಗೆದುಕೊಂಡು ಹೋಗಿದ್ದರು.
ಈ ಸಂಬಂಧ ಅನುಮಾನಗೊಂಡ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, 1.7 ಲಕ್ಷ ರೂ ಹಣ, 1 ಪಿಸ್ತೂಲ್ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಆದಾಯ ತೆರಿಗೆ ಇಲಾಖೆ ಹೆಸರಿನ ನಕಲಿ ಗುರುತಿನ ಚೀಟಿಯನ್ನು ವಶಕ್ಕೆ ಪಡೆದಿದ್ದಾರೆ.