ಬಳ್ಳಾರಿಯಲ್ಲಿ ಕೊರೋನಾ 3ನೇ ಅಲೆ ಅಬ್ಬರ: ಒಂದೇ ದಿನ 5 ಮಂದಿ ಮಹಾಮಾರಿಗೆ ಬಲಿ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೊರೋನಾ ಮೂರನೇ ಅಲೆ ಅಬ್ಬರಿಸುತ್ತಿದ್ದು, ಜಿಲ್ಲೆಗಳಲ್ಲಿ ಒಂದೇ ದಿನದಲ್ಲಿ 5 ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆ. ಇದು ಮೂರನೇ ಅಲೆಯ ವೇಳೆ ಸಂಭವಿಸಿದ ಅತೀ ಹೆಚ್ಚು ದೈನಂದಿನ ಸಾವುಗಳಾಗಿದೆ.
Published: 29th January 2022 07:49 AM | Last Updated: 29th January 2022 11:49 AM | A+A A-

ಸಂಗ್ರಹ ಚಿತ್ರ
ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೊರೋನಾ ಮೂರನೇ ಅಲೆ ಅಬ್ಬರಿಸುತ್ತಿದ್ದು, ಜಿಲ್ಲೆಗಳಲ್ಲಿ ಒಂದೇ ದಿನದಲ್ಲಿ 5 ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆ. ಇದು ಮೂರನೇ ಅಲೆಯ ವೇಳೆ ಸಂಭವಿಸಿದ ಅತೀ ಹೆಚ್ಚು ದೈನಂದಿನ ಸಾವುಗಳಾಗಿದೆ.
ಈ ನಡುವೆ ಜಿಲ್ಲೆಯಲ್ಲಿನ ಈ ಬೆಳವಣಿಗೆ ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದ್ದು, ಅಧಿಕಾರಿಗಳು ಮಾತ್ರ ಬಾಕಿ ಉಳಿದಿದ್ದ ಸಾವಿನ ವರದಿಯನ್ನು ಸೇರ್ಪಡೆಗೊಳಿಸಿದ ಪರಿಣಾಮ, ದೈನಂದಿನ ಅಂಕಿಅಂಶಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಓಮಿಕ್ರಾನ್ ನಂತರ ಆತಂಕ ಹೆಚ್ಚಿಸಿದ ನಿಯೋಕೋವ್ ರೂಪಾಂತರಿ!
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಇದುವರೆಗೆ 1,620 ಕೋವಿಡ್ -19 ಸಾವುಗಳು ವರದಿಯಾಗಿವೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೂ ಕೋವಿಡ್ ಮರಣ ಪ್ರಮಾಣ ಹೆಚ್ಚಿದೆ ಎಂದು ತಿಳಿದುಬಂದಿದೆ.
ಬಳ್ಳಾರಿಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ದನ ಎಚ್.ಎಲ್ ಮಾತನಾಡಿ, ಸಾವಿನ ಸಂಖ್ಯೆ ಕುರಿತು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕೆಲವು ಸಾವುಗಳ ಕುರಿತು ಸ್ಪಷ್ಟ ಮಾಹಿತಿಗಳು ತಿಳಿದುಬರುತ್ತಿಲ್ಲ. ಇದರಿಂದ ಡೇಟಾ ಸಂಗ್ರಹಣೆ ವಿಳಂಬವಾಗುತ್ತದೆ. ಕಳೆದ ಹತ್ತು ದಿನಗಳಲ್ಲಿ, ಕೇವಲ ಒಂದು ಕೋವಿಡ್-19 ಸಾವು ವರದಿಯಾಗಿದೆ ಮತ್ತು ಕೆಲವು ಬಾಕಿ ಇರುವ ಸಾವುಗಳನ್ನು ಡೇಟಾ ತಂಡವು ಅಪ್‌ಲೋಡ್ ಮಾಡಿದೆ. ಮೂರನೇ ಅಲೆಯಲ್ಲಿ ಮರಣ ಪ್ರಮಾಣ ಕಡಿಮೆ ಇರುವುದರಿಂದ ಜನರು ಭಯಪಡುವ ಅಗತ್ಯವಿಲ್ಲ. ಯಾವುದೇ ಕೋವಿಡ್ -19 ಸಾವುಗಳನ್ನು ಮರೆಮಾಚದಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 407 ಜಿಲ್ಲೆಗಳಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚು; ಫೆ.28ರವರೆಗೆ ಕೋವಿಡ್ ನಿರ್ಬಂಧ ಮುಂದುವರಿಕೆ
ಬಳ್ಳಾರಿ ಜಿಲ್ಲೆಯಲ್ಲಿ ಮೂರನೇ ಅಲೆಯಲ್ಲಿ 30 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ವಿಜಯನಗರದಲ್ಲಿ 2,100 ಸಕ್ರಿಯ ಪ್ರಕರಣಗಳಿದ್ದು, ಇವರಲ್ಲಿ ಹೆಚ್ಚಿನವರು ಮನೆಯಲ್ಲಿ ಐಸೋಲೇಷನ್ ಗೊಳಗಾಗಿದ್ದಾರೆ. ಗಂಭೀರ ಸಮಸ್ಯೆ ಎದುರಿಸುತ್ತಿರುವ ಕೆಲವರು ಬಳ್ಳಾರಿ ಜಿಲ್ಲಾಸ್ಪತ್ರೆ, ವಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.