ಡಾ ಸೌಂದರ್ಯ ನೀರಜ್ ಸಾವು: ಯಡಿಯೂರಪ್ಪ ನಿವಾಸಕ್ಕೆ ಕಮಲ್ ಪಂತ್ ಭೇಟಿ, ಇಂದು ಪೊಲೀಸರ ಕೈಸೇರಲಿದೆ ಮರಣೋತ್ತರ ಪರೀಕ್ಷೆ ವರದಿ
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (B S Yedyurappa) ಅವರ ಹಿರಿಯ ಪುತ್ರಿ ಪದ್ಮಾವತಿ ಮಗಳು ಡಾ ಸೌಂದರ್ಯ ನೀರಜ್ (Dr Saundarya Neeraj) ಆತ್ಮಹತ್ಯೆ ಪ್ರಕರಣ ನಂತರ ಇಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು.
Published: 29th January 2022 11:53 AM | Last Updated: 29th January 2022 01:48 PM | A+A A-

ಮೊಮ್ಮಗಳು ಡಾ ಸೌಂದರ್ಯ ನೀರಜ್ ಸೀಮಂತ ಕಾರ್ಯಕ್ರಮದಲ್ಲಿ ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (B S Yedyurappa) ಅವರ ಹಿರಿಯ ಪುತ್ರಿ ಪದ್ಮಾವತಿ ಮಗಳು ಡಾ ಸೌಂದರ್ಯ ನೀರಜ್ (Dr Saundarya Neeraj) ಆತ್ಮಹತ್ಯೆ ಪ್ರಕರಣ ನಂತರ ಇಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು.
ಇಂದು ಬೆಳಗ್ಗೆ ಬಿ ಎಸ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಬಂದು ಘಟನೆ ಹಾಗೂ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಇನ್ನೊಂದೆಡೆ ಹೈಗ್ರೌಂಡ್ಸ್ ಪೊಲೀಸರು ಸೌಂದರ್ಯ ಸಾವಿನ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಸೌಂದರ್ಯ ಪತಿ ನೀರಜ್ ದೂರಿನನ್ವಯ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಸ್ಥಳ ಮಹಜರು: ಡಾ ನೀರಜ್ ಮತ್ತು ಸೌಂದರ್ಯ ನೀರಜ್ ವಾಸವಿದ್ದ, ಸೌಂದರ್ಯ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ವಸಂತನಗರದಲ್ಲಿರುವ ಅಪಾರ್ಟ್ ಮೆಂಟಿನಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಲಿದ್ದು ಡಾ ನೀರಜ್ ಬಂದ ಮೇಲೆ ಮನೆ ಬಾಗಿಲು ತೆರೆಯಲಿದ್ದಾರೆ. ಸದ್ಯ ಡಾ ನೀರಜ್ ತಮ್ಮ ಫಾರ್ಮ್ ಹೌಸ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮರಣೋತ್ತರ ವರದಿ: ಡಾ ಸೌಂದರ್ಯ ಅವರ ಸಾವಿನ ನಂತರ ಬೌರಿಂಗ್ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಅದರ ವರದಿ ತಹಶೀಲ್ದಾರ್ ಗೆ ನೀಡಿ ನಂತರ ಇಂದು ಪೊಲೀಸರ ಕೈಸೇರಲಿದೆ.ಸೌಂದರ್ಯ ಅವರು ಬಳಸಿದ್ದ ಮೊಬೈಲ್, ಆತ್ಮಹತ್ಯೆಗೆ ಬಳಸಿದ್ದ ವೇಲ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆತ್ಮಹತ್ಯೆ ಕಾರಣ ಏನು ಎಂಬುದು ಬಹಿರಂಗ ಆಗಲಿದೆ. ನೇಣಿಗೆ ಶರಣಾದ ಗಾಯ ಹೊರತುಪಡಿಸಿ ದೇಹದ ಬೇರೆ ಯಾವ ಭಾಗದಲ್ಲೂ ಗಾಯಗಳಿಲ್ಲ.
ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಈಗ ನೀರವ ಮೌನ ಆವರಿಸಿದೆ. ಮುದ್ದಿನ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ ಇಡೀ ಕುಟುಂಬಕ್ಕೆ ಬಾರಿ ನೋವು ತಂದಿದೆ. ಸೌಂದರ್ಯರನ್ನು ಕಳೆದುಕೊಂಡ ಇಡೀ ಕುಟುಂಬ ಮೌನಕ್ಕೆ ಶರಣಾಗಿದೆ. ಆದರೆ ಈ ನಿರ್ಧಾರಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮಗು ಜನಿಸಿದ ಬಳಿಕ ಸೌಂದರ್ಯ ಖಿನ್ನತೆಗೆ ಒಳಗಾಗಿದ್ದರೂ ಎಂದು ಹೇಳಲಾಗುತ್ತಿದೆ.
ಸೌಂದರ್ಯ ಪತಿ ಬೆಂಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿಸ್ವಾಮಪ್ಪ ಸಹೋದರನ ಪುತ್ರ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾಗಿನಿಂದಲೂ ಪರಸ್ಪರ ಪರಿಚಯವಿತ್ತು. 2 ವರ್ಷಗಳ ಹಿಂದೆ ಸೌಂದರ್ಯ ಮತ್ತು ನೀರಜ್ ಕುಟುಂಬಸ್ಥರ ಇಚ್ಚೆಯಂತೆ ವಿವಾಹವಾಗಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ವಿವಾಹವಾಗಿತ್ತು.