ಫೆ.5ಕ್ಕೆ ಕಲಬುರಗಿ ಪಾಲಿಕೆ ಮೇಯರ್ ಚುನಾವಣೆ: ತಡೆ ಕೋರಿ ಹೈಕೋರ್ಟ್ ಮೊರೆ ಹೋಗಲು ಕಾಂಗ್ರೆಸ್ ನಿರ್ಧಾರ!
ಪ್ರಾದೇಶಿಕ ಆಯುಕ್ತರು ಫೆಬ್ರವರಿ 5ರಂದು ಮೇಯರ್, ಉಪಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ್ದಾರೆ.
Published: 29th January 2022 09:04 AM | Last Updated: 29th January 2022 01:43 PM | A+A A-

ಸಾಂದರ್ಭಿಕ ಚಿತ್ರ
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯ ಮೀಸಲಾತಿಯನ್ನು ಬದಲಾಯಿಸಿ ಹೊಸ ಆದೇಶ ಹೊರಡಿಸಿದ ಬೆನ್ನಲ್ಲೇ ಗುರುವಾರ ಪ್ರಾದೇಶಿಕ ಆಯುಕ್ತರು ಫೆಬ್ರವರಿ 5ರಂದು ಮೇಯರ್, ಉಪಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ್ದಾರೆ.
ಫೆ 5ರಂದು ಬೆಳಿಗ್ಗೆ 10.30ಕ್ಕೆ ನಾಮಪತ್ರವನ್ನು ಉಪ ವಿಭಾಗಾಧಿಕಾರಿಗೆ ಸಲ್ಲಿಸಬೇಕು. ಮಧ್ಯಾಹ್ನ 12ರ ಮತದಾನ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್ ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್‌ಗಳಿವೆ. ಚುನಾವಣೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಸ್ಥಾನದಲ್ಲಿ ಜಯಗಳಿಸಿದೆ. ಯಾವುದೇ ಪಕ್ಷ ಅಧಿಕಾರ ಹಿಡಿಯಲು 28 ಸದಸ್ಯ ಬಲದ ಅಗತ್ಯವಿದೆ. ಮೂರು ಪಕ್ಷಗಳಲ್ಲಿಯೂ ರಾಜಕೀಯ ಚಟುವಟಿಕೆ ಆರಂಭವಾಗಿದೆ.
27 ಸ್ಥಾನಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಪಕ್ಷ ಮೇಯರ್ ಮತ್ತು ಉಪ ಮೇಯರ್ ಅಧಿಕಾರ ಹಿಡಿಯಲು ಜೆಡಿಎಸ್ ಮೈತ್ರಿಗೆ ಆಹ್ವಾನ ಕೊಟ್ಟಿದೆ. ಮತ್ತೊಂದು ಕಡೆ ಬಿಜೆಪಿ ಸಹ ಜೆಡಿಎಸ್ ಸಂಪರ್ಕಿಸಿದೆ. ಜೆಡಿಎಸ್ ಕೈ ಕೊಟ್ಟರೂ ಅಧಿಕಾರ ಹಿಡಿಯಲು ಬಿಜೆಪಿ ತಂತ್ರ ರೂಪಿಸಿದೆ.
ಏಳು ಜನ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಚುನಾವಣೆಯಲ್ಲಿ ಮತದಾನ ಮಾಡಲು ಪರಿಷತ್ ಸದಸ್ಯರ ಹೆಸರನ್ನು ಬಿಜೆಪಿ ಮತದಾರರ ಪಟ್ಟಿಗೆ ಸೇರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ಕುರಿತು ಜಿಲ್ಲಾಧಿಕಾರಿಗೆ ತಕರಾರು ಅರ್ಜಿ ಸಲ್ಲಿಕೆ ಮಾಡಿದೆ.
ಬಿಜೆಪಿಯ ಲಕ್ಷ್ಮಣ ಸವದಿ (ಅಥಣಿ), ತುಳಸಿ ಮುನಿರಾಜು ಗೌಡ (ಬೆಂಗಳೂರು), ಪ್ರತಾಪ್ ಸಿಂಹ ನಾಯಕ್ (ಉಜಿರೆ), ಲೆಹರ್ ಸಿಂಗ್ (ಬೆಂಗಳೂರು), ಭಾರತಿ ಶೆಟ್ಟಿ (ಬೆಂಗಳೂರು), ಡಾ. ಸಾಬಣ್ಣ ತಳವಾರ (ಬೆಳಗಾವಿ), ರಘುನಾಥರಾವ್ ಮಲ್ಕಾಪುರೆ (ಬೀದರ್) ತಮ್ಮ ನೋಡೆಲ್ ಜಿಲ್ಲೆಯನ್ನಾಗಿ ಕಲಬುರಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಏಳು ಜನರ ದಾಖಲೆಗಳನ್ನು ಪರಿಶೀಲನೆ ಮಾಡಿದ ಸಹಾಯಕ ಆಯುಕ್ತರಾದ ಮೋನಾ ರೋತ್ ಡಾ. ತಳವಾರ ಸಾಬಣ್ಣ ಹಾಗೂ ಪ್ರತಾಪ್ ಸಿಂಹ ನಾಯಕ್ ಮನವಿ ತಿರಸ್ಕಾರ ಮಾಡಿದ್ದಾರೆ. ಉಳಿದ 5 ಪರಿಷತ್ ಸದಸ್ಯರ ಮನವಿ ಪುರಸ್ಕಾರಗೊಂಡಿದ್ದು ಅವರ ಹೆಸರು ಮತದಾರರ ಪಟ್ಟಿಗೆ ಸೇರಲಿದೆ.
ಇನ್ನು ಪರಿಷತ್ ಸದಸ್ಯರ ಹೆಸರು ಸೇರ್ಪಡೆಗೆ ಕಾಂಗ್ರೆಸ್ ತರಕಾರು ಅರ್ಜಿ ಸಲ್ಲಿಕೆ ಮಾಡಿದೆ. ಈ ಅರ್ಜಿ ಇನ್ನೂ ಜಿಲ್ಲಾಧಿಕಾರಿಗಳ ಮುಂದೆ ವಿಚಾರಣೆಗೆ ಬಾಕಿ ಇದೆ. ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆಯಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರಿ ಸ್ವೀಕರಿಸಿದ ಯಶವಂತ ವಿ. ಗುರುಕರ್ ಅರ್ಜಿ ವಿಚಾರಣೆ ನಡೆಸಬೇಕಿದೆ.
ಮೇಯರ್ ಸ್ಥಾನವನ್ನು ಪಡೆಯಲು ಪಕ್ಷವು 32 ಮತಗಳನ್ನು ಗಳಿಸಬೇಕಾಗಿದೆ. ಬಿಜೆಪಿಗೆ ನಾಲ್ಕು, ಕಾಂಗ್ರೆಸ್‌ಗೆ ಮೂರು ಮತಗಳ ಕೊರತೆ ಎದುರಾಗಿದೆ. ಜೆಡಿಎಸ್ ಕಿಂಗ್ ಮೇಕರ್ ಆಗಲು ಬಯಸಿದ್ದು, ಮೇಯರ್ ಸ್ಥಾನ ನೀಡುವ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಡಾ.ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಮೇಯರ್ ಚುನಾವಣೆಗೆ ತಡೆ ಕೋರಿ ಪಕ್ಷವು ಸೋಮವಾರ ಹೈಕೋರ್ಟ್‌ನ ಮೊರೆ ಹೋಗಲಿದೆ ಎಂದು ಹೇಳಿದ್ದಾರೆ.