ಮಹಿಳೆ ಮೇಲೆ ಸಂಚಾರಿ ಎಎಸ್ಐ ಹಲ್ಲೆ ಪ್ರಕರಣ: ತನಿಖೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶ
ವಾಹನಗಳ ಟೋಯಿಂಗ್ ಮಾಡುತ್ತಿದ್ದ ಪೊಲೀಸ್‌ಗೆ ಕಲ್ಲಿನಿಂದ ಹೊಡೆದರೆಂಬ ಕಾರಣಕ್ಕೆ, ಅಂಗವಿಕಲ ಮಹಿಳೆಗೆ ಬೂಟುಗಾಲಿನಿಂದ ಎಎಸ್ಐ ಒದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
Published: 30th January 2022 12:14 PM | Last Updated: 31st January 2022 02:01 PM | A+A A-

ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: ವಾಹನಗಳ ಟೋಯಿಂಗ್ ಮಾಡುತ್ತಿದ್ದ ಪೊಲೀಸ್‌ಗೆ ಕಲ್ಲಿನಿಂದ ಹೊಡೆದರೆಂಬ ಕಾರಣಕ್ಕೆ, ಅಂಗವಿಕಲ ಮಹಿಳೆಗೆ ಬೂಟುಗಾಲಿನಿಂದ ಎಎಸ್ಐ ಒದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, 'ಒಬ್ಬ ಅಮಾಯಕ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಅವಾಚ್ಯ ಮಾತುಗಳನ್ನು ಬಳಸಿದ್ದಲ್ಲದೆ, ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಸೂಚಿಸಿರುವೆ' ಎಂದಿದ್ದಾರೆ.
ಅಂತೆಯೇ 'ಯಾರೇ ಆದರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಇದಕ್ಕೆ ಪೊಲೀಸರೂ ಹೊರತಾಗಿಲ್ಲ' ಎಂದು ಅವರು ತಿಳಿಸಿದ್ದಾರೆ.
ವಿಕಲಚೇತನ ಮಹಿಳೆಗೆ ಬೂಟು ಕಾಲಿನಲ್ಲಿ ಒದ್ದ ಪೊಲೀಸ್ ಅಧಿಕಾರಿ
ಟೋಯಿಂಗ್ ವಾಹನದಲ್ಲಿ ಕೂತಿದ್ದ ಎಎಸ್ಐಗೆ ಕಲ್ಲು ಹೊಡೆದ ವಿಕಲಚೇತನ ಮಹಿಳೆಗೆ ನಡು ರಸ್ತೆಯಲ್ಲಿ ಬೂಟು ಕಾಲಲ್ಲಿ ಒದ್ದು ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಮೂರು ದಿನದ ಹಿಂದೆ ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯ ಟೋಯಿಂಗ್ ವಾಹನದ ಸಿಬ್ಬಂದಿ ಮೇಲೆ ಅಂಗವಿಕಲ ಮಹಿಳೆ ಕಲ್ಲು ಬೀಸಿದ್ದಾಳೆ. ಅದು ಎಎಸ್ಐ ಮುಖಕ್ಕೆ ಬಿದ್ದು ರಕ್ತ ಬಂದಿದೆ. ಟೋಯಿಂಗ್ ವಾಹನದಿಂದ ಕೆಳಗೆ ಇಳಿದು ಬಂದ ಎಎಸ್ಐ ಅವಾಚ್ಯ ಪದಗಳಿಂದ ನಿಂದನೆ ಮಾಡಿ ಬೂಟು ಕಾಲಲ್ಲಿ ಒದ್ದಿದ್ದರು.
ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಎಸ್ಐ ಆನಂತರ ಪುನಃ ಆ ಮಹಿಳೆಗೆ ಹಲ್ಲೆ ಮಾಡಿದ್ದು, ರಕ್ತ ಬಂದಿದೆ. ಇದಾದ ಬಳಿಕ ಎಎಸ್ಐ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿದ ಆರೋಪದಡಿ ಮೂರು ದಿನದ ಹಿಂದೆ ಅಂಗವಿಕಲ ಮಹಿಳೆಯನ್ನೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಆಕೆ ವಿಕಲಚೇತನ ಇರುವದರಿಂದ ಕ್ಷಮಿಸಿ ಬಿಡಿ ಎಂದು ಬಿಬಿಎಂಪಿ ಸಿಬ್ಬಂದಿ ಪೊಲೀಸರನ್ನು ಕೇಳಿಕೊಂಡಿದ್ದಾರೆ. ಆದರೂ ಆಕೆಯನ್ನು ಬಿಟ್ಟಿಲ್ಲ ಎನ್ನಲಾಗಿದೆ.
ಅಧಿಕಾರಿಯತ್ತ ಕಲ್ಲೆಸೆದಿದ್ದ ಮಹಿಳೆ
ಈ ಮಹಿಳೆಗೆ ಟೋಯಿಂಗ್ ವಾಹನ ಕಂಡರೆ ಅಗಲ್ಲ ಎನ್ನಲಾಗಿದೆ. ಹೀಗಾಗಿ ಟೋಯಿಂಗ್ ಮಾಡದಂತೆ ಪ್ರತಿ ನಿತ್ಯವೂ ಟೋಯಿಂಗ್ ವಾಹನದ ಮೇಲೆ ಕಲ್ಲು ಎಸೆಯುತ್ತಿದ್ದಳು. ಆಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಮೂರು ದಿನದ ಹಿಂದೆ ಆಕೆ ತೂರಿದ ಕಲ್ಲು ಎಎಸ್ಐ ಮುಖಕ್ಕೆ ಬಿದ್ದಿದೆ. ಆ ಸಿಟ್ಟಿನಲ್ಲಿ ಬೂಟು ಕಾಲಿನಲ್ಲಿ ಒದ್ದು ಆ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.