ಬೆಂಗಳೂರು ವಿವಿಯಲ್ಲಿ ಪೊಲೀಸರಿಂದ ಲಾಠಿ ಚಾರ್ಜ್: ಹಲವು ವಿದ್ಯಾರ್ಥಿಗಳಿಗೆ ಗಾಯ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ಧರಣಿ ನಿರತ ಎಬಿವಿಪಿ ಕಾಯರ್ಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
Published: 31st January 2022 02:30 PM | Last Updated: 31st January 2022 03:13 PM | A+A A-

ಲಾಠಿ ಚಾರ್ಜ್ ಮಾಡುತ್ತಿರುವ ಪೊಲೀಸರು.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ಧರಣಿ ನಿರತ ಎಬಿವಿಪಿ ಕಾಯರ್ಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಇಂದು ಎಬಿವಿಪಿ ಪ್ರತಿಭಟನೆ ಆರಂಭಿಸಿತ್ತು. ಪರೀಕ್ಷೆ ಮೌಲ್ಯಮಾಪನ, ಫಲಿತಾಂಶಕ್ಕೆ ಸಮಸ್ಯೆಯಾಗಿದೆ. ಇದನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದು ಪ್ರತಿಭಟನೆ ವೇಳೆ ಆಗ್ರಹಿಸಲಾಗುತ್ತಿತ್ತು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಹಲವರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಹಾಸ್ಟೆಲ್ ಸಮಸ್ಯೆ, ವಿದ್ಯಾರ್ಥಿ ವೇತನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ವಿವಿ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಈ ವೇಳೆ ವಿದ್ಯಾರ್ಥಿ ಸಂಘಟನೆಗಳು ನಡವೆಯೇ ಮಾರಾಮಾರಿಯಾಗಿದೆ. ಬೇರೆ ಬೇರೆ ವಿಚಾರಗಳಿಗಾಗಿ ಪ್ರತಿಭಟನೆಗೆ ಮುಂದಾಗಿದ್ದ, ಎಬಿವಿಪಿ ಮತ್ತು ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿದೆ.
ರಾಯಚೂರಿನಲ್ಲಿ ಅಂಬೇಡ್ಕರ್ ರವರಿಗೆ ಅವಮಾನ ಹಿನ್ನೆಲೆ ಬೆಂಗಳೂರು ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಗಿತ್ತು. ಮಾರ್ಕ್ಸ್ ಕಾರ್ಡ್, ಫಲಿತಾಂಶ ತಡವಾಗಿ ಬರುತ್ತಿರುವ ಹಿನ್ನೆಲೆ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರು.
ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ದೊಡ್ಡ ವಿಚಾರ. ದೇಶಕ್ಕಾಗಿ ನೀವು ಬರುವುದಿಲ್ಲ, ಮಾರ್ಕ್ಸ್ ಕಾರ್ಡ್, ಫಲಿತಾಂಶ ತಡವಾಗೋದು ಇದೆಲ್ಲ ಸಾಮಾನ್ಯ. ಇವತ್ತು ನಮ್ಮ ಪ್ರತಿಭಟನೆ ಇದೆ. ನೀವು ನಾಳೆ ಬನ್ನಿ ಎಂದು ಹೇಳಿ ಬೆಂಗಳೂರು ವಿವಿ ವಿದ್ಯಾರ್ಥಿಗಳು ಎಬಿವಿಪಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಎಬಿವಿಬಿ ವಿದ್ಯಾರ್ಥಿಗಳ ಮೇಲೆ ಬೆಂಗಳೂರು ಸಂಶೋಧನಾ ವಿವಿ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಜ್ಞಾನ ಭಾರತಿ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಲಾಠಿ ಚಾರ್ಜ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.