ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಮಿತಿ ರಚನೆ: ಸಿಎಂ ಬೊಮ್ಮಾಯಿ; ಹೈದರಾಬಾದ್ ಗೆ ಪಯಣ ಬೆಳೆಸಿದ ಮುಖ್ಯಮಂತ್ರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶನಿವಾರ ಬೆಂಗಳೂರಿನಿಂದ ಬೆಳಗ್ಗೆ ಹೈದರಾಬಾದ್ ಗೆ ಪ್ರವಾಸ ಬೆಳೆಸಿದ್ದಾರೆ, ಅಲ್ಲಿ ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಅದರಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿ ನಾಳೆ ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
Published: 02nd July 2022 09:22 AM | Last Updated: 02nd July 2022 02:00 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶನಿವಾರ ಬೆಂಗಳೂರಿನಿಂದ ಬೆಳಗ್ಗೆ ಹೈದರಾಬಾದ್ ಗೆ ಪ್ರವಾಸ ಬೆಳೆಸಿದ್ದಾರೆ, ಅಲ್ಲಿ ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಅದರಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿ ನಾಳೆ ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಹೈದರಾಬಾದ್ ಗೆ ತೆರಳುವ ಮುನ್ನ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಸಾಂದರ್ಭಿಕವಾಗಿ ಭೇಟಿ ಮಾಡಿ ರಾಜ್ಯದ ಕುರಿತು ಮಾತುಕತೆ ನಡೆಸಲು ಪ್ರಯತ್ನಿಸುತ್ತೇನೆ ಎಂದರು.
ಹೈದರಾಬಾದ್ ನಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು, ರಾಜ್ಯಗಳ ನಾಯಕರು ಭಾಗಿಯಾಗಲಿದ್ದಾರೆ.
ರಾಜ್ಯದ ವಿವಿಧ ನಗರ ಪಾಲಿಕೆಗಳಲ್ಲಿ ನೇರ ಪಾವತಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಸೇವೆಗಳನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಕಾನೂನು ನಿಯಮಗಳಿಗೆ ಅನುಸಾರವಾಗಿ ಅನುಷ್ಠಾನಗೊಳಿಸಲು ಹಿರಿಯ ಅಧಿಕಾರಿಗಳು, ಕಾನೂನು ಇಲಾಖೆ ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಪ್ರತಿನಿಧಿಗಳ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ಪೌರಕಾರ್ಮಿಕರ ಸಮಸ್ಯೆಗಳಿಗೆ ಮಾನವೀಯ ಸ್ಪಂದನೆಗೆ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ
ನಿನ್ನೆ ನಡೆದ ಪೌರಕಾರ್ಮಿಕರ ಸಮಸ್ಯೆಗಳ ಕುರಿತು ಸಭೆ ನಡೆಸಿದ ಬೊಮ್ಮಾಯಿ, ಪ್ರಸ್ತಾವಿತ ಸಮಿತಿಯು ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ. ಪೌರಕಾರ್ಮಿಕರು ಸಾಮಾಜಿಕ ಘನತೆ ಮತ್ತು ಭದ್ರತೆಗೆ ಅರ್ಹರು. ರಾಜ್ಯ ಸರಕಾರ ಮಾನವೀಯ ಧೋರಣೆಯೊಂದಿಗೆ ಅವರ ಸಂಕಷ್ಟಗಳಿಗೆ ಸ್ಪಂದಿಸಲಿದೆ. ಅವರ ಮಾಸಿಕ ಸಂಭಾವನೆಯನ್ನು 2,000 ರೂಪಾಯಿ ಹೆಚ್ಚಿಸಲಾಗಿದೆ ಎಂದು ಹೇಳಿದರು. ಪೌರಕಾರ್ಮಿಕರ ನೇಮಕಾತಿಯನ್ನು ಸರಳಗೊಳಿಸಲು ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಲಾಗುವುದು ಎಂದು ಕೂಡ ತಿಳಿಸಿದರು.
ಸಿಎಂ ಲಿಖಿತ ಭರವಸೆ ನೀಡಬೇಕು: ಪೌರಕಾರ್ಮಿಕರಿಗೆ ವಸತಿ ಸಾಲ ಸೌಲಭ್ಯ ನೀಡಲಾಗುವುದು, ಅವರ ಮಕ್ಕಳನ್ನು ವಿದ್ಯಾ ನಿಧಿ ವಿದ್ಯಾರ್ಥಿವೇತನ ಯೋಜನೆಗೆ ಒಳಪಡಿಸಲಾಗುವುದು. ಮಹಿಳಾ ಪೌರಕಾರ್ಮಿಕರಿಗೆ ಹೆರಿಗೆ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು. ಆದರೆ, ಧರಣಿ ಹಿಂಪಡೆಯಲು ಸಿಎಂ ಲಿಖಿತ ಭರವಸೆ ನೀಡಬೇಕು ಎಂದು ಪ್ರತಿಭಟನಾನಿರತ ಪೌರಕಾರ್ಮಿಕರು ಒತ್ತಾಯಿಸುತ್ತಿದ್ದು, ಅಲ್ಲಿಯವರೆಗೂ ತಮ್ಮ ಅಹೋರಾತ್ರಿ ಧರಣಿಯನ್ನು ಮುಂದುವರಿಸಲಿದ್ದಾರೆ.
ಪ್ರತಿಭಟನೆಯನ್ನು ಬೆಂಬಲಿಸಿರುವ ಎಐಸಿಸಿಟಿಯ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಪಿ ಪಿ ಅಪ್ಪಣ್ಣ ಅವರು ಮುಷ್ಕರವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ''ಪ್ರತಿಭಟನೆ ಮುಂದುವರಿಯಲಿದೆ. ಸರ್ಕಾರದಿಂದ ಲಿಖಿತವಾಗಿ ಬರದ ಹೊರತು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ' ಎಂದು ತಿಳಿಸಿದರು.
ಇದನ್ನೂ ಓದಿ: ಇಂದಿನಿಂದ ಎರಡು ದಿನ ಹೈದರಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ರಾಜ್ಯದ ನಾಯಕರು ಭಾಗಿ
ಇಂದು ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನೂರಾರು ಪೌರಕಾರ್ಮಿಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ನಗರ ಪಾಲಿಕೆ, ಗ್ರಾಮ ಸಭೆಗಳು ಹಾಗೂ ಪಟ್ಟಣ ಪಂಚಾಯತ ಪೌರಕಾರ್ಮಿಕ ಮಹಾ ಸಂಘದ ಅಧ್ಯಕ್ಷ ಶಿವಣ್ಣ ಮೈಸೂರು ಮಾತನಾಡಿ, ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಸ ತುಂಬುವವರು, ಕ್ಲೀನರ್‌ಗಳು, ಚಾಲಕರು ಮತ್ತು ಒಳಚರಂಡಿ ಕಾರ್ಮಿಕರಿಗೆ ಸೇವೆ ಕಾಯಂ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಾದ್ಯಂತ ಪೌರಕಾರ್ಮಿಕರು ಸಿಎಂಗೆ ಬಹಿರಂಗ ಪತ್ರ ಬರೆದು ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಶಾಶ್ವತ ಸ್ಥಾನಮಾನ, ಉತ್ತಮ ಕೆಲಸದ ಸ್ಥಿತಿಗತಿಗಳು, ಮನೆ, ಆರೋಗ್ಯ ಮತ್ತು ಅವರ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಕೆಲವು ಬೇಡಿಕೆಗಳನ್ನು ಸಿಎಂಗೆ ಸಲ್ಲಿಸಲಾಗಿದೆ.
ಸಮಸ್ಯೆ ಇಲ್ಲ: ಬಿಬಿಎಂಪಿ
ನಿನ್ನೆ ನಡೆದ ಮುಷ್ಕರದಿಂದ ಬೆಂಗಳೂರಿನಲ್ಲಿ ಕಸ, ತ್ಯಾಜ್ಯ ಸಂಗ್ರಹದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಆಯುಕ್ತ ಹರೀಶ್ ಕುಮಾರ್ ತಿಳಿಸಿದ್ದಾರೆ. 4,200 ಟನ್ ಘನ ಆರ್ದ್ರ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.