ಶಿಕ್ಷಕರಿಂದ ಥಳಿತ: ಆರನೇ ತರಗತಿ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು

ನೋಟ್ ಬುಕ್ ತಂದಿಲ್ಲ ಎಂಬ ಒಂದೇ ಕಾರಣಕ್ಕೆ ಆರನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಥಳಿಸಿದ ಪರಿಣಾಮ ಆತ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿಕ್ಷಕರಿಂದ ಥಳಿತ
ಶಿಕ್ಷಕರಿಂದ ಥಳಿತ

ಬೆಂಗಳೂರು: ನೋಟ್ ಬುಕ್ ತಂದಿಲ್ಲ ಎಂಬ ಒಂದೇ ಕಾರಣಕ್ಕೆ ಆರನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಥಳಿಸಿದ ಪರಿಣಾಮ ಆತ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ವಿಜಯನಗರದಲ್ಲಿರುವ ಬ್ಲೂಬೆಲ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.  ನೋಟ್ ಬುಕ್ ತಂದಿಲ್ಲ ಎಂದಿದ್ದಕ್ಕೆ ಬೆಂಗಳೂರಿನ ಬ್ಲೂಬೆಲ್ ಶಾಲೆಯಲ್ಲಿ ವಿದ್ಯಾರ್ಥಿಗೆ ಶಿಕ್ಷಕ ಹಲ್ಲೆ ನಡೆಸಿದ್ದಾಗಿ ಪೋಷಕರು ಆರೋಪಿಸಿದ್ದು, ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಬಲವಾದ ಏಟು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಣಿತ ಶಾಲೆಯ ಶಿಕ್ಷಕ ಹೊಡೆದಿದ್ದು, ಸೋಮವಾರ ಬಾಲಕನನ್ನು ವಾಣಿ ವಿಲಾಸ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಶುಕ್ರವಾರ ಸಂಜೆ 9.30ರ ಸುಮಾರಿಗೆ ಟ್ಯೂಷನ್ ಮುಗಿಸಿ ಮನೆಗೆ ವಾಪಸಾದ ಬಳಿಕ ಕಿವಿ ನೋವು ಎಂದು ವಿದ್ಯಾರ್ಥಿ ಪೋಷಕರಿಗೆ ಹೇಳಿದ್ದು, ಈ ವೇಳೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. "ತಮ್ಮ ಶಾಲೆಯಲ್ಲಿನ ಗಣಿತ ಶಿಕ್ಷಕರು ತರಗತಿಗೆ ನೋಟ್ ಬುಕ್ ತರಲು ಮರೆತಿದ್ದಕ್ಕಾಗಿ ಹೊಡೆದಿದ್ದಾರೆ ಎಂದು ಬಾಲಕ ನಮಗೆ ಹೇಳಿದ. ಏನಾಯಿತು ಎಂದು ಶಿಕ್ಷಕರನ್ನು ಕೇಳಲು ನಾವು ಅವನನ್ನು ಮೊದಲು ಶಾಲೆಗೆ ಕರೆದೊಯ್ದೆವು. ಆದರೆ ನಮ್ಮ ಮಗನ ಆರೋಗ್ಯದ ಸ್ಥಿತಿಯನ್ನು ನೋಡಿ ನಾವು ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ನಮ್ಮ ಮಗ ತೀವ್ರ ಕಿವಿ ನೋವು ಮತ್ತು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಲಕ್ಷ್ಮಿ ನರಸಿಂಹ ತಿಳಿಸಿದರು.

ಉಡಾಫೆ ಉತ್ತರ ನೀಡಿದ ಪ್ರಾಂಶುಪಾಲರು
ಮಗನ ಮೇಲೆ ಹಲ್ಲೆಯನ್ನು ಪ್ರಶ್ನಿಸಿದ ತಂದೆಗೆ ಪ್ರಾಂಶುಲಾಪರು, ಉಡಾಫೆಯ ಮಾತುಗಳನ್ನಾಡಿದ್ದಾರೆ. ಹೊಡೆದಿರುವ ಶಿಕ್ಷಕನಿಗೆ ಕೊರೋನಾ ತಗುಲಿದೆ. ಹೀಗಾಗಿ ನಾನು ಏನು ಮಾಡಲಿ ಎಂದು ಪ್ರಾಂಶುಪಾಲ ಹೇಳಿದ್ದಾಗಿ ವಿದ್ಯಾರ್ಥಿಯ ತಂದೆ ಲಕ್ಷ್ಮಿ ನರಸಿಂಹ ಅವರು ಟಿವಿ9 ಜೊತೆ ನೋವಿನ ಅಳಲನ್ನು ತೋಡಿಕೊಂಡಿದ್ದಾರೆ. ಶಿಕ್ಷಣ ಹಕ್ಕು (ಆರ್‌ಟಿಇ) ಕೋಟಾದಡಿ ಸೀಟು ಹಂಚಿಕೆಯಾದ ನಂತರ ವಿದ್ಯಾರ್ಥಿ ವಿಜಯನಗರದ ಬ್ಲೂ ಬೆಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿದ್ದಾನೆ. ತಂದೆ ಖಾಸಗಿ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಹ ಅವರು ಶಾಲೆಯ ಆಡಳಿತವನ್ನು ಸಂಪರ್ಕಿಸಲು ಹಲವಾರು ಬಾರಿ ಪ್ರಯತ್ನಿಸಿದ್ದಾರೆ. ಕೊನೆಗೆ ಪೋಷಕರು ಶಾಲೆಯ ಪ್ರಾಂಶುಪಾಲರ ಬಳಿ ವಿಷ. ಪ್ರಸ್ತಾಪಿಸಿದ್ದು, ತಡರಾತ್ರಿ ಕರೆ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ಅವರು ಕೋಪಗೊಂಡರು ಎಂದು ಅವರು ಆರೋಪಿಸಿದರು. ಆರೋಪಿ ಶಿಕ್ಷಕ ಮಹದೇಶ್ ಅವರನ್ನು ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಒಪ್ಪಿಕೊಂಡರು. ಶಾಲೆಯ ಅಧಿಕಾರಿಗಳು ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಮತ್ತು ಪರಿಸ್ಥಿತಿಯನ್ನು ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಹೇಳಿದರು.

''ಶಿಕ್ಷಕರಿಗೆ ವಿವರಣೆ ಕೋರಿ ನೋಟಿಸ್ ನೀಡಲಾಗಿದ್ದು, ವಿಚಾರಣೆಗಾಗಿ ಸೋಮವಾರ ಶಾಲೆಗೆ ಬಂದಿದ್ದಾರೆ. ಘಟನೆಯ ವಿಷಯ ತಿಳಿದ ನಾವು ಮಗುವನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನಂತರ ಚಿಕಿತ್ಸೆಗಾಗಿ ಶುಕ್ರವಾರ ವಾಣಿ ವಿಲಾಸಕ್ಕೆ ಕರೆದೊಯ್ದಿದ್ದೇವೆ. ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಬದಲು ಪೋಷಕರು ನಮ್ಮನ್ನು ಸಂಪರ್ಕಿಸಿದ್ದರು. ಎಂಟೆಕ್ ಓದುತ್ತಿರುವ ಮಹದೇಶ್ ನಾಲ್ಕು ವರ್ಷಗಳಿಂದ ಬೋಧನೆ ಮಾಡುತ್ತಿದ್ದು, ಶಾಲೆಯಲ್ಲಿ ಇದುವರೆಗೆ ಅಂತಹ ಯಾವುದೇ ಪ್ರಕರಣ ನಡೆದಿಲ್ಲ ಎಂದು ಶಿಕ್ಷಣ ಸಂಘದ ಅಧ್ಯಕ್ಷ ರಾಜೇಶ್ ಎಚ್ ಎನ್ ಟಿಎನ್‌ಐಇಗೆ ತಿಳಿಸಿದರು.

ಮಕ್ಕಳು ಸಾಮಾನ್ಯವಾಗಿ ಹೋಮ್‌ವರ್ಕ್ ಮಾಡುವುದಿಲ್ಲ ಮತ್ತು ಕೋವಿಡ್ -19 ಸಾಂಕ್ರಾಮಿಕದ ನಂತರ ಅವರ ಮನೋವಿಜ್ಞಾನ ಮತ್ತು ಶಿಕ್ಷಣದ ಬಗ್ಗೆ ಗಂಭೀರತೆ ಬದಲಾಗಿದೆ ಎಂದು ರಾಜೇಶ್ ಹೇಳಿದರು. ಏತನ್ಮಧ್ಯೆ, ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಪಿಐ) ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಪೋಷಕರು ಮತ್ತು ಶಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಪೋಷಕರ ದೂರಿನ ಮೇರೆಗೆ ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಾಲಾ ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೋಷಕರು ಹಾಗೂ ಮಗುವಿನ ಹೇಳಿಕೆಯನ್ನೂ ಪಡೆದುಕೊಂಡಿದ್ದಾರೆ.

ವಾಣಿ ವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದ ಎಚ್‌ಒಡಿ ಡಾ.ಮಲ್ಲೇಶ್‌ ಕೆ ಮಾತನಾಡಿ, ಮಗುವನ್ನು ಜುಲೈ 1 ರಂದು ದಾಖಲಿಸಲಾಗಿದ್ದು, ಜುಲೈ 4 ರಂದು ಬಿಡುಗಡೆ ಮಾಡಲಾಗಿದೆ. ಬಲ ಕೆನ್ನೆಯ ಮೇಲೆ ಸವೆತವಿತ್ತು. ಕೆನ್ನೆ ಮತ್ತು ಕಿವಿಗೆ ಸ್ಪರ್ಶಿಸಿದಾಗ ಕಿವಿ ನೋವು ಎಂದು ಬಾಲಕ ಹೇಳುತ್ತಿದ್ದ. ಇಎನ್ಟಿ, ನೇತ್ರವಿಜ್ಞಾನ ಮತ್ತು ಮಾನಸಿಕ ಮೌಲ್ಯಮಾಪನಗಳನ್ನು ಮಾಡಲಾಗಿದೆ. ಅವರ ಬಾಲಕನ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಮತ್ತು 2-3 ದಿನಗಳ ನಂತರ ಫಾಲೋ-ಅಪ್ ಚಿಕಿತ್ಸೆಗಾಗಿ ಹಿಂತಿರುಗಲು ಅವರನ್ನು ಕೇಳಲಾಗಿದೆ ಎಂದರು.

ಕ್ರಮ ಕೈಗೊಳ್ಳಲಾಗುವುದು ಎಂದ ಅಧಿಕಾರಿ
ಘಟನೆಯ ಕುರಿತು ವರದಿ ಇನ್ನೂ ಜಾರಿಯಲ್ಲಿದ್ದು, ವರದಿ ಆಧರಿಸಿ ಶಾಲೆ ಮತ್ತು ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ದಕ್ಷಿಣ ವಿಭಾಗದ ಉಪನಿರ್ದೇಶಕ ಬೈಲಾಂಜನಪ್ಪ TNIE ಗೆ ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟಿಎನ್‌ಐಇಗೆ ತಿಳಿಸಿದ್ದಾರೆ. ಬ್ಲಾಕ್ ಶಿಕ್ಷಣಾಧಿಕಾರಿ, ಬೆಂಗಳೂರು ದಕ್ಷಿಣ, ಗಿರಿಜಮ್ಮ ಎಚ್.ಎನ್ ಅವರು ಪ್ರಾಂಶುಪಾಲರಾದ ಶೋಭಾ ಆರ್ ಮತ್ತು ಮಹದೇಶ್ ಅವರನ್ನು ವಿಚಾರಿಸಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com