ಉದ್ಯೋಗ ಸೃಜನೆ, ಕೌಶಲ್ಯಾಭಿವೃದ್ಧಿ ಉತ್ತೇಜಿಸಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ನೂತನ ಉದ್ಯೋಗ ನೀತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರೋತ್ಸಾಹಕ ನೀಡುವುದರೊಂದಿಗೆ ಉದ್ಯಮ ವಲಯದಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯಗಳ ತರಬೇತಿಗೂ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ನೂತನ ಉದ್ಯೋಗ ನೀತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರೋತ್ಸಾಹಕ ನೀಡುವುದರೊಂದಿಗೆ ಉದ್ಯಮ ವಲಯದಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯಗಳ ತರಬೇತಿಗೂ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಉದ್ಯೋಗ ನೀತಿ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ, ಕೈಗಾರಿಕಾ ನೀತಿಯಲ್ಲಿ ಉದ್ಯೋಗ ಸೃಜನೆ ಹೆಚ್ಚಾಗಿ ಮಾಡುವ ವಸ್ತ್ರೋದ್ಯಮ ಎಫ್ ಎಂಸಿಜಿ ಮತ್ತಿತರ ಹೆಚ್ಚಿನ ಮಾನವ ಸಂಪನ್ಮೂಲ ಬೇಡಿಕೆ ಇರುವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವಂತೆ ಸೂಚಿಸಿದರು. ಇದರೊಂದಿಗೆ ಕೈಗಾರಿಕೋದ್ಯಮಗಳಲ್ಲಿ ಬೇಡಿಕೆ ಇರುವ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಮತ್ತಷ್ಟು ಹೆಚ್ಚಿಸಲು ಸೂಚಿಸಿದರು.

ಕೌಶಲ್ಯಾಭಿವೃದ್ಧಿ ತರಬೇತಿಯನ್ನು ವಿಕೇಂದ್ರೀಕರಣಗೊಳಿಸಬೇಕು. ಪ್ರತಿ ಐಟಿಐ, ಜಿಟಿಟಿಸಿಗಳಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು, ಗುಣಮಟ್ಟದ ಪ್ರಾಯೋಗಿಕ ಅನುಭವ ನೀಡುವ ತರಬೇತಿ ನೀಡಲು ಕ್ರಮ ವಹಿಸಬೇಕು ಎಂದರು.

ರಾಜ್ಯದಲ್ಲಿ ಈಗಾಗಲೇ ಉನ್ನತೀಕರಿಸಿದ ಐಟಿಐಗಳು ಹಾಗೂ ಜೆಟಿಟಿಸಿಗಳಲ್ಲಿ ಅಲ್ಪಾವಧಿಯ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿ ಸಲಹೆ ನೀಡಿದರು. ಇದರೊಂದಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕೈಗಾರಿಕೋದ್ಯಮಗಳು ಕೌಶಲ್ಯಾಭಿವೃದ್ಧಿ ತರಬೇತಿ ನಡೆಸಲು ಉತ್ತೇಜನ ನೀಡುವಂತೆ ಸಲಹೆ ನೀಡಿದರು.

ಉದ್ಯೋಗ ನೀತಿಯು ಉದ್ಯೋಗ ಸೃಜನೆ ಹಾಗೂ ಕುಶಲ ಮಾನವ ಸಂಪನ್ಮೂಲ ಸೃಜನೆಗೆ ಪೂರಕವಾಗುವಂತೆ ರೂಪಿಸಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ನೀತಿಯನ್ನು ಅನುಮೋದನೆಗಾಗಿ ಸಲ್ಲಿಸುವಂತೆ ಸೂಚಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com