'ನನ್ನ ಪತಿ ಮೂರು ದಿನಗಳಿಂದ ಮನೆಗೆ ಬಂದಿರಲಿಲ್ಲ, ಕೊಲೆ ಏಕೆ ಮಾಡಿದರು ಗೊತ್ತಿಲ್ಲ, ಗುರೂಜಿ ನನಗೆ ಯಾವುದೇ ಆಸ್ತಿ ನೀಡಿಲ್ಲ': ಆರೋಪಿ ಮಹಾಂತೇಶ್ ಪತ್ನಿ ಹೇಳಿಕೆ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಭೀಕರವಾಗಿ ಚಾಕುವಿನಿಂದ ಹತ್ಯೆಗೈದು ಪರಾರಿಯಾಗಲು ಯತ್ನಿಸಿದ್ದ ಅವರ ಆಪ್ತ ಶಿಷ್ಯರು ಕೊಲೆ ಮಾಡಿ ಮುಂಬೈಗೆ ಓಡಿಹೋಗಲು ಯತ್ನಿಸುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.
ಸರಳ ವಾಸ್ತು ಗುರೂಜಿಯ ಕೊಲೆ ಮಾಡಿದ ಆರೋಪಿಗಳು
ಸರಳ ವಾಸ್ತು ಗುರೂಜಿಯ ಕೊಲೆ ಮಾಡಿದ ಆರೋಪಿಗಳು

ಬೆಳಗಾವಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಭೀಕರವಾಗಿ ಚಾಕುವಿನಿಂದ ಹತ್ಯೆಗೈದು ಪರಾರಿಯಾಗಲು ಯತ್ನಿಸಿದ್ದ ಅವರ ಆಪ್ತ ಶಿಷ್ಯರು ಕೊಲೆ ಮಾಡಿ ಮುಂಬೈಗೆ ಓಡಿಹೋಗಲು ಯತ್ನಿಸುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಬಳಿ ಆರೋಪಿಗಳನ್ನು ನಿನ್ನೆ ಸಾಯಂಕಾಲ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ಕಾರನಲ್ಲಿ ಮುಂಬೈಗೆ ಹೋಗುತ್ತಿರುವಾಗ ಜೆಸಿಬಿಯಿಂದ ಕಾರನ್ನು ಅಡ್ಡಗಟ್ಟಿ ಚೇಸ್ ಮಾಡಿ ಪೊಲೀಸರು ಹಿಡಿದಿದ್ದಾರೆ. ಆದರೆ ಆರೋಪಿಗಳು ತಾವೇ ಪೊಲೀಸರಿಗೆ ಕರೆ ಮಾಡಿ ಕರೆಸಿಕೊಂಡಿದ್ದೇವೆ ಎನ್ನುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ತಾವು ಬೇನಾಮಿ ಆಸ್ತಿಗಾಗಿಯೇ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಿಸಿಬಿ ಎಸಿಪಿ, ಎಸ್ ಪಿ, ಮೂವರು ಸಿಐಗಳಿಂದ ಆರೋಪಿಗಳನ್ನು ನಿನ್ನೆ ರಾತ್ರಿಯಿಂದ ತೀವ್ರ ವಿಚಾರಣೆ ನಡೆಯುತ್ತಿದೆ. ಹಲವು ಬೇನಾಮಿ ಆಸ್ತಿ ವ್ಯವಹಾರಗಳನ್ನು ಈ ಇಬ್ಬರು ಹಂತಕರ ಹೆಸರಿನಲ್ಲಿ ಗುರೂಜಿ ಮಾಡಿಟ್ಟಿದ್ದರು ಎಂದು ಹೇಳಲಾಗುತ್ತಿದೆ. 

ನಿನ್ನೆ ಕೊಲೆ ಮಾಡುವುದಕ್ಕೆ 5 ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಆರೋಪಿ ಮಹಾಂತೇಶ ಶಿರೂರ ಗುರೂಜಿಯ ಕೊಲೆಯ ಸುಳಿವು ನೀಡಿದ್ದನಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. 'ಅಧರ್ಮ ತಾಂಡವವಾಡುತ್ತಿರುವಾಗ ದುಷ್ಟರನ್ನು ನಾಶಮಾಡಲು ಮತ್ತು ಧರ್ಮವನ್ನು ಮರುಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವ ಪ್ರಭು ಇನ್ನೂ ವಿಳಂಬವೇಕೆ' ಎಂದು ಮಹಾಭಾರತ ಎಂಬ ಹೆಸರಿನಲ್ಲಿ ಹಂತಕ ಕೃಷ್ಣನ ಫೋಟೋ ಹಾಕಿ ಪೋಸ್ಟ್ ಮಾಡಿದ್ದನು ಎನ್ನಲಾಗುತ್ತಿದೆ. 

ಚಂದ್ರಶೇಖರ ಗುರೂಜಿ ಹತ್ಯೆ ಬಳಿಕ ಮುಂಬೈಯ ಸರಳವಾಸ್ತು ಕಚೇರಿ ಇಂದು ಮುಚ್ಚಿದೆ. ಚಂದ್ರಶೇಖರ ಗುರೂಜಿ ಮಹಾರಾಷ್ಟ್ರದಲ್ಲಿ ಕೂಡ ಜನಪ್ರಿಯರಾಗಿದ್ದರು. ಮುಂಬೈಯ ಟಿಟಿಸಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಸಿಜಿ ಪರಿವಾರ ಹೆಸರಿನ ಕಚೇರಿಯಲ್ಲಿ ಸರಳ ವಾಸ್ತು ಕೆಲಸ ಕಾರ್ಯಗಳು ನಡೆಯುತ್ತಿದ್ದವು.ಸದ್ಯ ಕಚೇರಿ ಬಂದ್ ಆಗಿದ್ದು ಅಲ್ಲಿ ಸ್ಮಶಾನ ಮೌನ ಆವರಿಸಿದೆ.

ಆರೋಪಿ ಮಹಾಂತೇಶ್ ಪತ್ನಿ ಹೇಳಿಕೆ: ಇನ್ನು ಮಾಧ್ಯಮಗಳಿಗೆ ಪ್ರತಿಕ್ರಿಯೆ ಹೇಳಿಕೆ ನೀಡುತ್ತಿರುವ ಮಹಾಂತೇಶ್ ಪತ್ನಿ, ಆಸ್ತಿ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ, ನನ್ನ ಪತಿ ಏಕೆ ಕೊಲೆ ಮಾಡಿದರು ಎಂಬುದು ಕೂಡ ಗೊತ್ತಿಲ್ಲ, ಈ ಬಗ್ಗೆ ಏನು ಹೇಳಬೇಕೆಂದೇ ನನಗೆ ಗೊತ್ತಾಗುತ್ತಿಲ್ಲ.

ಗುರೂಜಿಯವರ ಜೊತೆ ನಾವು ಚೆನ್ನಾಗಿದ್ದೆವು. ಅಂತಹ ಗಲಾಟೆ, ಕಲಹ ಯಾವುದೂ ನಡೆದಿರಲಿಲ್ಲ. ಗುರೂಜಿಯವರು ನನ್ನನ್ನು ಸ್ವಂತ ಮಗಳಂತೆ ನೋಡಿಕೊಂಡಿದ್ದಾರೆ. ಒಂದು ದಿನ ಕೂಡ ಸಿಟ್ಟುಮಾಡಿಕೊಂಡಿರಲಿಲ್ಲ. ನನ್ನ ಪತಿ 2016ರಲ್ಲಿ ಸರಳ ವಾಸ್ತು ಕಚೇರಿಯಿಂದ ಕೆಲಸ ಬಿಟ್ಟಾಗ ಏನಕ್ಕೆ ಬಿಟ್ಟರು ಎಂದು ಹೇಳಿರಲಿಲ್ಲ. ಗುರೂಜಿಯವರಲ್ಲಿ ಕೇಳಿದ್ದಾಗ, 'ನೀನ್ಯಾಕೆ ತಲೆಕೆಡಿಸಿಕೊಳ್ಳುತ್ತೀ, ನಿನ್ನ ಪಾಡಿಗೆ ಕೆಲಸ ಮಾಡಿಕೊಂಡು ಹೋಗು' ಎಂದು ಹೇಳಿದ್ದರು ಎಂದು ವನಜಾಕ್ಷಿ ಹೇಳುತ್ತಾರೆ.

ವನಜಾಕ್ಷಿ ಸಹ ಗುರೂಜಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು 2019ರಲ್ಲಿ ಕೆಲಸ ಬಿಟ್ಟಿದ್ದರು. ಗುರೂಜಿ ಹೆಸರಿನಲ್ಲಿ ಅಪಾರ್ಟ್ ಮೆಂಟ್ ಇರುವುದು ಹೌದು, ಅದರಲ್ಲಿ 40 ಮನೆಗಳನ್ನು ಒಬ್ಬೊಬ್ಬರು ತೆಗೆದುಕೊಂಡಿದ್ದಾರೆ, ನಾವು 20 ಲಕ್ಷ ಸಾಲ ಮಾಡಿ ಖರೀದಿಸಿದ್ದು ಈಗಲೂ ಸಾಲವಿದೆ. ಯಾವ ಆಸ್ತಿಯೂ ನನ್ನ ಹೆಸರಿನಲ್ಲಿ ಗುರೂಜಿ ಮಾಡಿರಲಿಲ್ಲ. ಅವೆಲ್ಲಾ ಸುದ್ದಿ ಸುಳ್ಳು, ನನ್ನ ಪತಿ ಕೊಲೆ ಮಾಡಿದ್ದು ತಪ್ಪು, ಮಾಡಬಾರದಿತ್ತು, ನನ್ನ ಪತಿ ಗುರೂಜಿಯವರನ್ನು ಕೊಲ್ಲುವ ಮನಸ್ಸು ಮಾಡಿದರು ಎಂದು ನನಗೆ ಈಗಲೂ ಗೊತ್ತಿಲ್ಲ, ಕಳೆದ ಮೂರು ದಿನಗಳಿಂದ ಮನೆಗೆ ಬಂದಿರಲಿಲ್ಲ ಎಂದಿದ್ದಾರೆ. 

ಮಂಜುನಾಥ್ ಸರಳ ವಾಸ್ತು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು, ನಮಗೂ ಆತನಿಗೂ ಏನೂ ಸಂಬಂಧವಿಲ್ಲ, ಗುರೂಜಿಯವರು ಹತ್ಯೆಯಾಗಿದ್ದು ನಿಜಕ್ಕೂ ನನಗೆ ದುಃಖವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com