ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ: ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ಸುರಿಯುತ್ತಿದ್ದ ದುಷ್ಕರ್ಮಿಗಳ ಪತ್ತೆಹಚ್ಚಿ ಟ್ರ್ಯಾಕ್ಟರ್ ವಶಪಡಿಸಿದ ಬಿಬಿಎಂಪಿ

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ ವರದಿ ಬಂದ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ(BBMP) ಸಿಬ್ಬಂದಿ ಬನಶಂಕರಿ 3ನೇ ಹಂತದಲ್ಲಿ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಟ್ರ್ಯಾಕ್ಟರ್ ವಶಪಡಿಸಿಕೊಂಡಿರುವ ಘಟನೆ ನಡೆದಿದೆ. 
ಬನಶಂಕರಿ 3ನೇ ಹಂತದ ವೀರಭದ್ರನಗರದ ಕಸದ ರಾಶಿಯನ್ನು ಸುಟ್ಟುಹಾಕಿ ಹೊಗೆ ಬರುತ್ತಿರುವುದು
ಬನಶಂಕರಿ 3ನೇ ಹಂತದ ವೀರಭದ್ರನಗರದ ಕಸದ ರಾಶಿಯನ್ನು ಸುಟ್ಟುಹಾಕಿ ಹೊಗೆ ಬರುತ್ತಿರುವುದು

ಬೆಂಗಳೂರು: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ (The New Indian express newspaper) ಬೆಂಗಳೂರು ಆವೃತ್ತಿಯಲ್ಲಿ ವರದಿ ಬಂದ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ (BBMP) ಸಿಬ್ಬಂದಿ ಬನಶಂಕರಿ 3ನೇ ಹಂತದಲ್ಲಿ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಟ್ರ್ಯಾಕ್ಟರ್ ವಶಪಡಿಸಿಕೊಂಡಿರುವ ಘಟನೆ ನಡೆದಿದೆ. 

ಆಗಿರುವ ಘಟನೆಯೇನು?: ಬೆಂಗಳೂರಿನ ಬನಶಂಕರಿ 3ನೇ ಹಂತದ ದೀಪಾಂಜಲಿ ನಗರ ವಾರ್ಡ್ ನಲ್ಲಿ ವೀರಭದ್ರ ನಗರ ನಿವಾಸಿಗಳು ಹಲವು ಸಮಯಗಳಿಂದ ಅಕ್ರಮವಾಗಿ ಕಸ, ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ, ಇದರಿಂದ ತೊಂದರೆಯಾಗುತ್ತಿದೆ ಎಂದು ದೂರುತ್ತಾ ಬಂದಿದ್ದರು. ಬಿಬಿಎಂಪಿ ಸಹಾಯ ಅರ್ಜಿಯನ್ನು ಕೂಡ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. 

ತ್ಯಾಜ್ಯ ಸುರಿಯುವ ಮಾಫಿಯಾವೇ ನಗರದಲ್ಲಿದ್ದು ಅವರು ರಾತ್ರಿ ಹೊತ್ತು ಟ್ರ್ಯಾಕ್ಟರ್ ನಲ್ಲಿ ಕಸಗಳನ್ನು ತುಂಬಿಸಿಕೊಂಡು ಬಂದು ಸುರಿಯುತ್ತಾರೆ. ನಂತರ ಅದಕ್ಕೆ ಬೆಂಕಿಯಿಟ್ಟು ಸುಟ್ಟುಹಾಕುತ್ತಾರೆ. ಈ ಸುಡುವಾಗ ಬರುವ ಹೊಗೆ ಭಾರೀ ವಿಷಕಾರಿಯಾಗಿದ್ದು ಸುತ್ತಮುತ್ತ ಇರುವ ನಿವಾಸಿಗಳ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದರು.

ದೀಪಾಂಜಲಿ ನಗರ ವಾರ್ಡ್ ನ ಇಂದಿರಾ ಕ್ಯಾಂಟೀನ್ ಹಿಂದುಗಡೆ ತ್ಯಾಜ್ಯ ಸುರಿಯುತ್ತಿದ್ದು ನಿನ್ನೆ ಮಂಗಳವಾರ ಸಹ ಹಗಲು ಹೊತ್ತು ಕಸದ ರಾಶಿಯನ್ನು ಸುರಿದು ಹೋಗಿದ್ದರು. ಅದನ್ನು ನಿವಾಸಿಗಳು ವಿಡಿಯೊ ಮಾಡಿ ಬಿಬಿಎಂಪಿಗೆ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿದ್ದರು. ವಾರ್ಡ್ ಮಟ್ಟದಲ್ಲಿ ಜನಪ್ರತಿನಿಧಿಗಳಿಗೆ ಹೋಗಿ ದೂರು ಸಲ್ಲಿಸಿದರೆ ಅದು ರಾಜಕೀಯ ತಿರುವು ಪಡೆದುಕೊಳ್ಳಬಹುದು ಎಂದು ಬಿಬಿಎಂಪಿಯ ಸಹಾಯ ಆಪ್ ನಲ್ಲಿ ದೂರು ಸಲ್ಲಿಸಿದ್ದರು.

ಈ ವಿಡಿಯೊ ಹರಿದಾಡುತ್ತಿದ್ದಂತೆ ನಿನ್ನೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಸಮಸ್ಯೆಯ ವರದಿ ಪ್ರಕಟವಾಗಿದೆ. ಇದನ್ನು ಗಮನಿಸಿದ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಆಯುಕ್ತ ಹರೀಶ್ ಕುಮಾರ್ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. 

ನಿವಾಸಿಗಳು ನಿಖರವಾದ ಸ್ಥಳ ಮತ್ತು ವಿವರಗಳನ್ನು ನೀಡಿದಲ್ಲಿ ಸಮಸ್ಯೆ ಬಗ್ಗೆ ವಾರ್ಡ್ ಕಚೇರಿಗೆ ಕರೆ ಮಾಡಿ ಇದರಿಂದ ಸ್ಥಳದಲ್ಲೇ ಕ್ರಮ ಕೈಗೊಳ್ಳಬಹುದು. ನಿವಾಸಿಗಳು ನಮಗೆ ಎಚ್ಚರಿಕೆ ನೀಡಿದರೆ ನಾವು ತಕ್ಷಣ ಮಾರ್ಷಲ್ ನ್ನು ಕಳುಹಿಸುತ್ತೇವೆ ಎಂದು ಘನತ್ಯಾಜ್ಯ ನಿರ್ವಹಣಾ ವಿಭಾಗದ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದರು. ಜನವಸತಿ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸುರಿದು ಬೆಂಕಿ ಹಚ್ಚುವುದು ಕ್ರಿಮಿನಲ್ ಅಪರಾಧ ಎಂದು ಹೇಳಿದ್ದರು.

ಅದರಂತೆ ಇಂದು ಬಿಬಿಎಂಪಿ ಕಡೆಯಿಂದ ಮಾರ್ಷಲ್ ಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಟ್ರ್ಯಾಕ್ಟರ್ ಗಳನ್ನು ಹಿಡಿದಿದ್ದು ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com