ಕೆಐಎಡಿಬಿ ಭೂ ಸ್ವಾಧೀನ, 15 ವರ್ಷದಿಂದ ಕೊಪ್ಪಳದ ಈ ರೈತನಿಗೆ ಇನ್ನೂ ಸಿಗದ ಪರಿಹಾರ!

ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ್ ಗ್ರಾಮದ ರೈತ ಅಂದಾನಗೌಡ ಪಾಟೀಲ್ ಅವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 15 ವರ್ಷಗಳ ಕಳೆದರೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ(ಕೆಐಎಡಿಬಿ) ಇನ್ನೂ ಪರಿಹಾರ ನೀಡಿಲ್ಲ.
ರೈತರು ಸಾಂದರ್ಭಿಕ ಚಿತ್ರ
ರೈತರು ಸಾಂದರ್ಭಿಕ ಚಿತ್ರ

ಕೊಪ್ಪಳ:  ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ್ ಗ್ರಾಮದ ರೈತ ಅಂದಾನಗೌಡ ಪಾಟೀಲ್ ಅವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 15 ವರ್ಷಗಳ ಕಳೆದರೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ಇನ್ನೂ ಪರಿಹಾರ ನೀಡಿಲ್ಲ.

2007ರಲ್ಲಿ ಕೊಪ್ಪಳ ಹೊರವಲಯ ಬಸಾಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉಕ್ಕು ಕೈಗಾರಿಕೆಗಾಗಿ ಸುಮಾರು 1,000 ಎಕರೆ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡಿತ್ತು. ಪ್ರತಿ ಎಕರೆಗೆ 3 ಲಕ್ಷ ರೂ. ಪರಿಹಾರನ್ನು ಭೂ ಸ್ವಾಧೀನಪಡಿಸಿಕೊಂಡ ರೈತರಿಗೆ ಮಂಡಳಿ ನೀಡಿತ್ತು. ಆದರೆ, ಭೂಮಿ ಸ್ವಾಧೀನಕ್ಕೂ ಮುನ್ನ ಅಂದಾನಗೌಡ ಖರೀದಿಸಿದ್ದ ಬಸಾಪುರ ಗ್ರಾಮದ ಸರ್ವೆ ನಂಬರ್ 132ರಲ್ಲಿ ಒಂದು ಎಕರೆ ಭೂಮಿ ಕೈ ಬಿಟ್ಟಿತ್ತು.

ಅಂದಾನಗೌಡನಿಗೆ ಪರಿಹಾರ ನೀಡುವ ಬದಲು ಭೂಮಿಯ ಹಿಂದಿನ ಮಾಲೀಕರಿಗೆ ಕೆಐಎಡಿಬಿ ನೀಡಿತ್ತು. ಇದನ್ನು ಅಂದಾನಗೌಡ ಕೆಐಎಡಿಬಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದಾಗ ಹಿಂದಿನ ಮಾಲೀಕರಿಂದ ಬಡ್ಡಿ ಸೇರಿದಂತೆ ರೂ. 3.66 ಲಕ್ಷ ರೂಪಾಯಿಯನ್ನು ಕೆಐಎಡಿಬಿ ವಸೂಲಿ ಮಾಡಿತ್ತು. ಆದರೆ, ಇಲ್ಲಿಯವರೆಗೂ ಅಂದಾನಗೌಡ ಅವರಿಗೆ ಪರಿಹಾರವನ್ನು ನೀಡಿಲ್ಲ. ಧಾರವಾಡದಲ್ಲಿರುವ ಕಚೇರಿಗೆ ಅನೇಕ ಬಾರಿ ಸುತ್ತಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಒಂದು ತಿಂಗಳೊಳಗೆ ಬಡ್ಡಿಯೊಂದಿಗೆ 15 ವರ್ಷದ ಪರಿಹಾರ ನೀಡದಿದ್ದರೆ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ನಿವಾಸದ ಮುಂಭಾಗ ತಮ್ಮ ಕುಟುಂಬ ಸದಸ್ಯರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಳೆದ ತಿಂಗಳು ರಾಜ್ಯ ಸರ್ಕಾರಕ್ಕೆ ಅಂದಾನಗೌಡ ಪತ್ರ ಬರೆದಿದ್ದಾರೆ.  

ಈ ಮಧ್ಯೆ ಕೆಎಐಡಿಬಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯಿ ನೀಡುತ್ತಿಲ್ಲ. ಈ ವಿಷಯವನ್ನು ಪರಿಶೀಲಿಸಲಾಗುವುದು, ಆದಷ್ಟು ಬೇಗ ಅಂದಾನಗೌಡ ಅವರಿಗೆ ಪರಿಹಾರ ವಿತರಿಸಲಾಗುವುದು ಎಂದು ಸಹಾಯಕ ಕಮೀಷನರ್ ಬಸವನೇಪ್ಪ ಕಲಾಶೆಟ್ಟಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸೆಗೆ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com