ನಗರ ಪ್ರದೇಶಗಳಲ್ಲಿ 128 ಮಹಿಳಾ ಕ್ಲಿನಿಕ್ ಗಳ ಸ್ಥಾಪನೆಗೆ ಆರೋಗ್ಯ ಇಲಾಖೆ ಚಿಂತನೆ

ಮುಂದಿನ ತಿಂಗಳು ನಗರ ಪ್ರದೇಶಗಳಲ್ಲಿ 128 ಮಹಿಳಾ ಕ್ಲಿನಿಕ್ ಗಳ ಸ್ಥಾಪನೆಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಮಹಿಳೆಯರು ಶೀಘ್ರದಲ್ಲಿಯೇ ತಮ್ಮ ಅನಾರೋಗ್ಯ ಸಮಸ್ಯೆಗಳನ್ನು ನಿರಾಳವಾಗಿ ಪರಿಹರಿಸಿಕೊಳ್ಳಬಹುದಾಗಿದೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ಬೆಂಗಳೂರು: ಮುಂದಿನ ತಿಂಗಳು ನಗರ ಪ್ರದೇಶಗಳಲ್ಲಿ 128 ಮಹಿಳಾ ಕ್ಲಿನಿಕ್ ಗಳ ಸ್ಥಾಪನೆಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಮಹಿಳೆಯರು ಶೀಘ್ರದಲ್ಲಿಯೇ ತಮ್ಮ ಅನಾರೋಗ್ಯ ಸಮಸ್ಯೆಗಳನ್ನು ನಿರಾಳವಾಗಿ ಪರಿಹರಿಸಿಕೊಳ್ಳಬಹುದಾಗಿದೆ.

128 ಮಹಿಳಾ ಕ್ಲಿನಿಕ್ ಗಳ ಪೈಕಿ 57 ಬಿಬಿಎಂಪಿ ವ್ಯಾಪ್ತಿಯಲ್ಲಿ ಬರಲಿದ್ದು, ಉಳಿದವುಗಳನ್ನು ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ಅಸ್ವಿತ್ವಕ್ಕೆ ಬರಲಿವೆ. ಇಡೀ ದೇಶದಲ್ಲಿಯೇ ಇಂತಹ ಕ್ಲಿನಿಕ್ ಗಳನ್ನು ಸ್ಥಾಪಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರಾದ ಡಾ. ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.

ಹದಿಹರೆಯದವರ ಸಮಸ್ಯೆಗಳು, ಮಹಿಳೆಯರಿಗೆ ಸಂಬಂಧಿಸಿದ ತೊಂದರೆಗಳು, ತಪಾಸಣೆ, ಸಮಾಲೋಚನೆ, ಕುಟುಂಬ ನಿರ್ವಹಣೆ ಸೇವೆಗಳು, ಪ್ರಸವ, ಆರೈಕೆ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲು ಖಾಸಗಿ ವಲಯದ ಮಹಿಳಾ ಕ್ಲಿನಿಕ್ ಗಳಂತೆ ಸುಸಜ್ಜಿತ ರೀತಿಯಲ್ಲಿ ಮಹಿಳಾ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುತ್ತಿದೆ. ಮೈಸೂರಿನಲ್ಲಿ ಇತ್ತೀಚಿಗೆ ಪೈಲಟ್ ಯೋಜನೆ ಆಧಾರದ ಮೇಲೆ 10 ಕ್ಲಿನಿಕ್ ಗಳನ್ನು ಆರಂಭಿಸಲಾಗಿದ್ದು, ಅವುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು. 

ಮೈಸೂರಿನಲ್ಲಿರುವ ಮಹಿಳಾ ಕ್ಲಿನಿಕ್ ಗಳಲ್ಲಿ ಪ್ರತಿದಿನ 50 ರಿಂದ 100 ಮಹಿಳಾ ರೋಗಿಗಳ ತಪಾಸಣೆ ನಡೆಸಲಾಗುತ್ತದೆ. ಮಹಿಳಾ ವೈದ್ಯರು, ನರ್ಸ್ ಗಳು ಇರಲಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಹೆಚ್. ಪ್ರಸಾದ್ ತಿಳಿಸಿದರು.

ಮಹಿಳಾ ಕ್ಲಿನಿಕ್ ಗಳ ಕಲ್ಪನೆ ಕುರಿತಂತೆ ಪ್ರತಿಕ್ರಿಯಿಸಿದ ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್, ಸುಶಿಕ್ಷಿತ ಹೆಣ್ಣು ಮಕ್ಕಳು ಕೂಡಾ ಡೆಲಿವರಿ ಮತ್ತಿತರ ಸಮಸ್ಯೆಗಳ ಕುರಿತು ಪುರುಷ ವೈದ್ಯರೊಂದಿಗೆ ಮಾಹಿತಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಅವರ ಖಾಸಗಿ, ಗುಪ್ತ ಸಮಸ್ಯೆಗಳನ್ನು ಮಹಿಳಾ ವೈದ್ಯರೊಂದಿಗೆ ಹಂಚಿಕೊಂಡು ಚಿಕಿತ್ಸೆ ಪಡೆಯಲು ಇಂತಹ  ಕ್ಲಿನಿಕ್ ಗಳ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಇವುಗಳನ್ನು ತೆರಯಬೇಕು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com