ಹಣ ಕಬಳಿಸಲು ತರಾತುರಿಯಲ್ಲಿ ಅಮೃತ್ ನಗರೋತ್ಥಾನ ಯೋಜನೆ: ಎಎಪಿ ಆರೋಪ

ಅಮೃತ್ ನಗರೋತ್ಥಾನ ಯೋಜನೆ ಮೂಲಕ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಬಿಜೆಪಿಯ ಶೇ. 40 ರಷ್ಟು ಕಮೀಷನ್ ಸರ್ಕಾರ ತರಾತುರಿಯಲ್ಲಿ ಯೋಜನೆ ಜಾರಿಗೆ ತರುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಎಎಪಿ ಮುಖಂಡ ಮೋಹನ್ ದಾಸರಿ
ಎಎಪಿ ಮುಖಂಡ ಮೋಹನ್ ದಾಸರಿ

ಬೆಂಗಳೂರು: ಅಮೃತ್ ನಗರೋತ್ಥಾನ ಯೋಜನೆ ಮೂಲಕ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಬಿಜೆಪಿಯ ಶೇ. 40 ರಷ್ಟು ಕಮೀಷನ್ ಸರ್ಕಾರ ತರಾತುರಿಯಲ್ಲಿ ಯೋಜನೆ ಜಾರಿಗೆ ತರುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, ಅಮೃತ್ ನಗರೋತ್ಥಾನ ಯೋಜನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 6,000 ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಬೆಂಗಳೂರಿನ 28 ಶಾಸಕರಿಗೆ ಒಟ್ಟು 3, 850 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಬಿಜೆಪಿ ಶಾಸಕರಿಗೆ ಭಾರೀ ಮೊತ್ತ, ಕಾಂಗ್ರೆಸ್ ಜೆಡಿಎಸ್ ಶಾಸಕರಿಗೆ ಅತಿ ಕಡಿಮೆ ಮೊತ್ತ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ. ಬರೋಬ್ಬರಿ 2,718 ಕೋಟಿ ರೂಪಾಯಿಯನ್ನು ಬಿಜೆಪಿ ಶಾಸಕರಿಗೆ ನೀಡಲಾಗಿದೆ. ಅಮೃತ್ ನಗರೋತ್ಥಾನ ಯೋಜನೆಯು ಬಿಜೆಪಿ ಪಾಲಿಗೆ ಮಾತ್ರ ಅಮೃತವಾಗಿದ್ದು, ಸರ್ಕಾರದ ಬೊಕ್ಕಸ ಹಾಗೂ ಬೆಂಗಳೂರಿಗೆ ವಿಷವಾಗುತ್ತಿದೆ ಎಂದು ಹೇಳಿದರು.

ನ್ಯಾಯಾಲಯದ ಆದೇಶದಂತೆ ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ನಡೆದು ಹೊಸ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಇದಾದ ನಂತರ ಯೋಜನೆ ಜಾರಿಗೆ ತಂದರೆ ಬಿಜೆಪಿ ಶಾಸಕರಿಗೆ ಲೂಟಿ ಮಾಡಲು ಸಾಧ್ಯವಾಗುವುದಿಲ್ಲವೆಂದು ತರಾತುರಿಯಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಹೀಗೆ ಆತುರದಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆ ಗುಣಮಟದ್ದಾಗಿದ್ದು, ಜನರು ಸಮಸ್ಯೆ ಎದುರಿಸಲಿದ್ದಾರೆ. ಬಿಜೆಪಿಗೆ ಶಾಸಕರ ಹಿತ ಮುಖ್ಯವೇ ಹೊರತು ಜನರ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯವಲ್ಲ ಎಂದು ಮೋಹನ್ ದಾಸರಿ ಹೇಳಿದರು. 

ನಾಡಿನ ಇತಿಹಾಸ ಕಂಡ ಅತ್ಯಂತ ಭ್ರಷ್ಟ ಸರ್ಕಾರವೆಂದರೆ ಈಗಿನ ಶೇ. 40 ಕಮೀಷನ್ ನ ಬಿಜೆಪಿ ಸರ್ಕಾರ. ಜನರ ಹಣವನ್ನು ಲೂಟಿ ಮಾಡುವುದರಲ್ಲಿ ಬಿಜೆಪಿ ಸರ್ಕಾರ ನಿರತವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಪ್ರೋತ್ಸಾಹಿಸಿ ಅಧರಲ್ಲಿ ಸಿಂಹಪಾಲು ಪಡೆಯುವುದಕ್ಕೆ ಬಿಜೆಪಿ ಸರ್ಕಾರ ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಿತ್ತು. ಜನರು ಹಾಗೂ ಮಾಧ್ಯಮಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರಿಂದ ಹೆದರಿ ಆದೇಶ ಹಿಂಪಡೆದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com