ಕಾರಿನತ್ತ ಹಣ ಎಸೆದಿಲ್ಲ, ಕೈ ಜಾರಿ ಬಿದ್ದಿದೆ: ಸಿದ್ದರಾಮಯ್ಯ ಕ್ಷಮೆಯಾಚಿಸಿದ ಮುಸ್ಲಿಂ ಮಹಿಳೆ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪರಿಹಾರ ಹಣವನ್ನು ಹಿಂದಕ್ಕೆ ಎಸೆದಿದ್ದ ಮುಸ್ಲಿಂ ಮಹಿಳೆ ಇದೀಗ ಕ್ಷಮೆಯಾಚಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪರಿಹಾರ ಹಣವನ್ನು ಹಿಂದಕ್ಕೆ ಎಸೆದಿದ್ದ ಮುಸ್ಲಿಂ ಮಹಿಳೆ ಇದೀಗ ಕ್ಷಮೆಯಾಚಿಸಿದ್ದಾರೆ. 

ಸಿದ್ದರಾಮಯ್ಯ ಅವರಿಗೆ ನೋವುಂಟು ಮಾಡಬೇಕು ಎಂಬ ಉದ್ದೇಶ ನನಗಿರಲಿಲ್ಲ. ಮೊದಲಿಗೆ ಹಣ ಬೇಡವೆಂದು ಸಿದ್ದರಾಮಯ್ಯನವರ ಕಾರಿನ ಬಳಿ ಹೋಗಿ ಹೇಳಿದ್ದೇವು. ನಂತರ ಅವರ ಕಾರನ್ನು ಹಿಂಬಾಲಿಸಿ ಹೋಗುವಾಗ ಹಣ ಕೈಜಾರಿ ಬಿದ್ದು ಹೋಗಿದೆ. ನನ್ನಿಂದ ತಪ್ಪಾಗಿದ್ದರೆ ಸಿದ್ದರಾಮಯ್ಯನವರ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. 

ಕೆರೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯಾರು ತಪ್ಪು ಮಾಡಿದ್ದಾರೋ ಅವರನ್ನು ಬಂಧಿಸಲಿ. ಕೆಲವರಿಂದ ಕೆರೂರಿನಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಅಮಾಯಕರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಈ ನೋವಿನಿಂದ ನಾನು ಹಾಗೆ ಮಾತನಾಡಿದ್ದೆ ಅಷ್ಟೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ನಿನ್ನೆ ಭೇಟಿ ನೀಡಿ ಕೆರೂರು ಪಟ್ಟಣ ಹಿಂಸಾಚಾರದಲ್ಲಿ ಗಾಯಗೊಂಡವರ ಕುಟುಂಬಸ್ಥರಿಗೆ ಪರಿಹಾರ ನೀಡಲು ಹೋದ ವೇಳೆ ಮುಸ್ಲಿಂ ಮಹಿಳೆ ಕೊಟ್ಟ 2 ಲಕ್ಷ ರೂಪಾಯಿ ಹಣವನ್ನು ಕಾರಿನತ್ತ ಎಸೆದಿದ್ದರು.

ಜುಲೈ 6ರಂದು ಹಿಂದೂ-ಮುಸ್ಲಿಂ ಕೋಮಿನ ಯುವಕರ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಯುವತಿಯರನ್ನು ಚುಡಾಯಿಸಿದ ಕಾರಣಕ್ಕೆ ಗಲಾಟೆ ಆರಂಭವಾಗಿ ಅದು ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಸಹ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಹಲವು ವಾಹನಗಳು ಜಖಂಗೊಂಡಿದ್ದವು. ಕೆರೂರು ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಿ ನಿಷೇಧಾಜ್ಞೆ ಹೇರಲಾಗಿತ್ತು. ಘಟನೆಯಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಗಾಯಾಳು ರಫೀಕ್ ಸೋದರಿ ರಜ್ಮಾ, ನಮಗೆ ದುಡ್ಡು ಬೇಡ, ನಾವು ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತೇವೆ. ನಮಗೆ ಶಾಂತಿ ಬೇಕು, ನಮ್ಮನ್ನು ನಮ್ಮ ಪಾಡಿಗೆ ಶಾಂತಿಯಿಂದ ಬದುಕಲು ಬಿಡಿ ಎಂದು ಕಾರಿನತ್ತ ಬಿಸಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com