ಪರಿಶಿಷ್ಟ ಜಾತಿಗಳಿಗೆ ಸಾಮೂಹಿಕ ವಿವಾಹ ಯೋಜನೆ ಜಾರಿಗೆ ಸರ್ಕಾರದ ಚಿಂತನೆ

2023 ರ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಮತಗಳನ್ನು ಸೆಳೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಮಂದಿಗೆ ಶುಭ ಲಗ್ನ ಎಂಬ ಸಾಮೂಹಿಕ ವಿವಾಹ ಯೋಜನೆ ಜಾರಿಗೆ ಮುಂದಾಗಿದೆ.
ವಿವಾಹ ಕಾರ್ಯಕ್ರಮ (ಸಾಂಕೇತಿಕ ಚಿತ್ರ)
ವಿವಾಹ ಕಾರ್ಯಕ್ರಮ (ಸಾಂಕೇತಿಕ ಚಿತ್ರ)

ಬೆಂಗಳೂರು: 2023 ರ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಮತಗಳನ್ನು ಸೆಳೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಮಂದಿಗೆ ಶುಭ ಲಗ್ನ ಎಂಬ ಸಾಮೂಹಿಕ ವಿವಾಹ ಯೋಜನೆ ಜಾರಿಗೆ ಮುಂದಾಗಿದೆ.

2020 ರಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಪ್ತಪದಿ ಎಂಬ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿತ್ತು. ಆದರೆ ಅದು ಕೋವಿಡ್-19 ಸಾಂಕ್ರಾಮಿಕದಿಂದ ಸ್ಥಗಿತಗೊಂಡಿತ್ತು. ಕಳೆದ ವರ್ಷದಿಂದ ಅದನ್ನು ಮರು ಜಾರಿಗೊಳಿಸಲಾಗಿದೆ. ಸಪ್ತಪದಿ ಯೋಜನೆಯಡಿ, ವರನಿಗೆ ಶರ್ಟ್, ಧೋತಿ ಹಾಗೂ 5000 ರೂಪಾಯಿ ನಗದು, ವಧುವಿಗೆ ರೇಷ್ಮೆ ಸೀರೆ, 1,000 ರೂಪಾಯಿ ನಗದು ಮಂಗಳ ಸೂತ್ರಕ್ಕಾಗಿ 8 ಗ್ರಾಮ್ ಚಿನ್ನ ನೀಡಲಾಗುತ್ತಿತ್ತು.

ಸಪ್ತಪದಿ ಯೋಜನೆಯನ್ನು ಈ ಹಿಂದಿನ ಮುಜರಾಯಿ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಆಯೋಜಿಸುತ್ತಿದ್ದರು.

ಶುಭ ಲಗ್ನ ಎನ್ನುವುದು ಇದೇ ಮಾದರಿಯ ಸಾಮೂಹಿಕ ವಿವಾಹ ಕಾರ್ಯಕ್ರಮವಾಗಿರಲಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗುವ ಈ ಕಾರ್ಯಕ್ರಮದಲ್ಲಿ ವಧು-ವರರಿಗೆ ಹೆಚ್ಚಿನ ಪ್ರಯೋಜನಗಳು ಸಿಗಲಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಶುಭ ಲಗ್ನ ಯೋಜನೆಯಿಂದ ಪರಿಶಿಷ್ಟ ಜಾತಿಗೆ ಸೇರಿದ 28-30 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, ಈ ವಿಭಾಗದಲ್ಲಿ ಹಲವು ಮಂದಿ ಆರ್ಥಿಕವಾಗಿ ದುರ್ಬಲರಾದವರಿಗೆ ನೆರವು ದೊರೆಯಲಿದೆ. ಸಪ್ತಪದಿ ಯೋಜನೆಯ ಮಾದರಿಯಲ್ಲೇ ಶುಭ ಲಗ್ನ ಯೋಜನೆಯಲ್ಲಿಯೂ ವಧು-ವರರಿಗೆ ವಸ್ತ್ರಗಳು ದೊರೆಯಲಿದೆ. ಜೊತೆಗೆ ದಂಪತಿಗೆ ದೀರ್ಘಾವಧಿಯಲ್ಲಿ ಉಪಯೋಗವಾಗುವಂತಹ ಸ್ಥಿರ ಠೇವಣಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ, ಇವೆಲ್ಲಾ ಪ್ರಾರಂಭಿಕ ಯೋಜನೆಗಳು ಎಂದು ಮೂಲಗಳು ತಿಳಿಸಿವೆ.

ಸಪ್ತಪದಿ ಯೋಜನೆ ಹಿಂದೂ ಕಾಯ್ದೆಯಡಿಯಲ್ಲಿ ಎಲ್ಲಾ ಅರ್ಹ, ವಧು-ವರರಿಗೆ ಅನ್ವಯವಾಗುತ್ತಿತ್ತು. ಶುಭಲಗ್ನ ಯೋಜನೆ ಎಸ್ ಸಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿರಲಿದೆ. ಎಸ್ ಸಿ ಅಡಿಯಲ್ಲಿ ನೂರಾರು ಉಪಜಾತಿಗಳಿದ್ದು ಎಲ್ಲರೂ ಭಿನ್ನವಾದ ಆಚರಣೆಗಳನ್ನು ಹೊಂದಿರುತ್ತಾರೆ. ಅದ್ದರಿಂದ ಪ್ರತ್ಯೇಕವಾದ ವಿವಾಹ ಕಾರ್ಯಕ್ರಮ ಆಯೋಜನೆ ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿ ಸರಳವಾದ ಧಾರ್ಮಿಕ ಆಚರಣೆಗಳಿರಲಿವೆ ಜೊತೆಗೆ ವಿವಾಹ ನೋಂದಣಿಯೂ ಆಗಲಿದ್ದು, ಊಟದ ವ್ಯವಸ್ಥೆಯೂ ಇರಲಿದೆ.

ಪ್ರತಿ ಜಿಲ್ಲೆಯಲ್ಲೂ 100 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿ ವರ್ಷ 35 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com