‘ಹರ್‌‌ಘರ್‌ ತಿರಂಗಾ' ಅಭಿಯಾನ: ಬೆಂಗಳೂರಿನಲ್ಲಿ 10 ಲಕ್ಷ ಧ್ವಜ ಹಾರಿಸಲು ಬಿಬಿಎಂಪಿ ಟಾರ್ಗೆಟ್!

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಅದ್ಧೂರಿಯಾಗಿ ಯಶಸ್ವಿಯಾಗಲು ಆಚರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಜ್ಜಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಅದ್ಧೂರಿಯಾಗಿ ಯಶಸ್ವಿಯಾಗಲು ಆಚರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಜ್ಜಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕನಿಷ್ಠ 10 ಲಕ್ಷ ರಾಷ್ಟ್ರಧ್ವಜ ಹಾರಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಿಬಿಎಂಪಿಗೆ ಧ್ವಜಗಳನ್ನು ಸರಬರಾಜು ಮಾಡಲಾಗುತ್ತದೆ. 25 ಹಾಗೂ 10 ರು. ಎರಡು ದರ ದಲ್ಲಿ ನಾಗರಿಕರು ಧ್ವಜಗಳನ್ನು ಖರೀದಿ ಸಬಹುದು. ನನ್ನದು ಎಂಬ ಭಾವನೆ ಬರಲಿ ಎಂಬ ಕಾರಣಕ್ಕೆ ದರ ನಿಗದಿ ಮಾಡಲಾಗಿದೆ’ ಎಂದು ವಿವರ ನೀಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಎಲ್ಲ ಕಚೇರಿಗಳಲ್ಲಿ ವಿಶೇಷ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ವಿಶೇಷ ಕವರ್‌ ಅನ್ನು ಬಿಬಿಎಂಪಿ ಹೊರತರುತ್ತಿದೆ. ವಿಶೇಷ ಸ್ಟಿಕರ್‌, ಬ್ಯಾನರ್‌, ಎಲ್‌ಇಡಿಗಳನ್ನು ವಿನ್ಯಾಸಗೊಳಿಸಿ ಪ್ರದರ್ಶನ ಮಾಡಲಾಗುತ್ತದೆ. ಆ.10ರೊಳಗೆ ಕಾರ್ಯಕ್ರಮ ಪಟ್ಟಿ, ವಿವರಣೆ ಪ್ರಕಟಿಸಲಾಗುತ್ತದೆ ಎಂದರು.

ವಲಯವಾರು ವಾರ್ಡ್‌ಮಟ್ಟದಲ್ಲಿ ಎಲ್ಲ ಮನೆಗಳಿಗೂ ಧ್ವಜಗಳನ್ನು ವಿತರಿಸುವ ಕಾರ್ಯವನ್ನು ಸಹಾಯಕ ಎಂಜಿನಿಯರ್‌, ಕಂದಾಯ ನಿರೀಕ್ಷಕರಿಗೆ ವಹಿಸಲಾಗಿದೆ. ಅವರು ತಮ್ಮ ವ್ಯಾಪ್ತಿಯ ಮನೆಗಳಿಗೆ ಧ್ವಜಗಳನ್ನು ತಲುಪಿಸಬೇಕು. ಜನರು 25 ಅಥವಾ 10ರ ದರದ ಧ್ವಜವನ್ನು ಕೇಳಿದರೆ ಅವರಿಗೆ ನೀಡಬೇಕು. ಒಟ್ಟು ಹಣವನ್ನು ಅವರು ವಲಯ ಆಯುಕ್ತರ ಕಚೇರಿಯಲ್ಲಿ ಸಂದಾಯ ಮಾಡಬೇಕು. ಬಿಬಿಎಂಪಿ ಎಲ್ಲವನ್ನೂ ಒಟ್ಟುಗೂಡಿಸಿ ಸರ್ಕಾರಕ್ಕೆ ತಲುಪಿಸುತ್ತದೆ ಎಂದರು.

‘ಹರ್‌ ಘರ್‌ ತಿರಂಗಾ’ದಡಿ ಆ.13ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ಎಲ್ಲರೂ ಹಾರಿಸಬಹುದು. ಅದಕ್ಕೆ ಕೆಲವು ನಿಯಮಗಳಿವೆ. ಅವುಗಳ ಬಗೆಗೂ ಜನರಿಗೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್‌ಮೆಂಟ್‌ಗಳವರಿಗೆ ಮಾಹಿತಿ ನೀಡಲಾಗುತ್ತದೆ. ಇದರ ಸಂಪೂರ್ಣ ನಿರ್ವಹಣೆಯನ್ನು ಆಡಳಿತ ವಿಭಾಗದ ವಿಶೇಷ ಆಯುಕ್ತರಿಗೆ ನೀಡಲಾಗಿದೆ’ ಎಂದು ಹೇಳಿದರು.

ಬಿಬಿಎಂಪಿಯಲ್ಲಿರುವ ಎಲ್ಲ 16 ಸಾವಿರ ಪೌರಕಾರ್ಮಿಕರು ತಲಾ ರು.10ರ ಧ್ವಜವನ್ನು ಪಡೆಯಲು ಸಮ್ಮತಿಸಿದ್ದಾರೆ. ಇವರಲ್ಲದೆ ನಮ್ಮ ಎಲ್ಲ ಸಿಬ್ಬಂದಿಯೂ ಖರೀದಿಸಲಿದ್ದಾರೆ. ಬಿಬಿಎಂಪಿಯಲ್ಲೇ ಸುಮಾರು 20 ಸಾವಿರ ಧ್ವಜ ಖರೀದಿಯಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com