21 ವರ್ಷದೊಳಗಿನ 'ಅಪ್ರಾಪ್ತ'ರಿಗೆ ಬಾರ್-ಪಬ್ ಪ್ರವೇಶ ನಿಷೇಧ: ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

21 ವರ್ಷದೊಳಗಿನ 'ಅಪ್ರಾಪ್ತ'ರಿಗೆ ಬಾರ್-ಪಬ್ ಪ್ರವೇಶ ನಿಷೇಧಿಸುವಂತೆ  ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆ ಹೊರಡಿಸಿದ್ದಾರೆ.
ಎಡಿಜಿಪಿ ಆಲೋಕ್ ಕುಮಾರ್
ಎಡಿಜಿಪಿ ಆಲೋಕ್ ಕುಮಾರ್

ಬೆಂಗಳೂರು: 21 ವರ್ಷದೊಳಗಿನ 'ಅಪ್ರಾಪ್ತ'ರಿಗೆ ಬಾರ್-ಪಬ್ ಪ್ರವೇಶ ನಿಷೇಧಿಸುವಂತೆ  ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆ ಹೊರಡಿಸಿದ್ದಾರೆ.

ಹೌದು.. ರಾಜ್ಯದಲ್ಲಿ ಪಬ್, ಬಾರ್ ಮತ್ತು ಮದ್ಯದಂಗಡಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶವನ್ನು ಹೊರಡಿಸಿದ್ದು,  ಪಬ್, ಬಾರ್, ಮತ್ತು ಮದ್ಯದಂಗಡಿಗಳು ನಿಗಧಿತ ಸಮಯದಲ್ಲಿ ಬಂದ್ ಮಾಡುವ ಜೊತೆಗೆ ಕಲವು ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆಯನ್ನು ನೀಡಲಾಗಿದೆ.

ಅಪ್ರಾಪ್ತ ವಯಸ್ಕರು ಬಾರ್ ಅಥವಾ ಪಬ್‌ಗಳಿಗೆ ಪ್ರವೇಶಿಸುವುದನ್ನು ತಡೆಯಲು ಎಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದು, ಪಬ್‌ಗಳು, ಬಾರ್‌ಗಳಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶ ನಿಷೇಧಿಸುವಂತೆ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. 

ಬಾರ್ ಮತ್ತು ಪಬ್ ಸೇರಿದಂತೆ ಮದ್ಯದಂಗಡಿಗಳಿದೆ ಮೀಸೆ ಚಿಗುರದ ಅಪ್ರಾಪ್ತರು ಹೋಗುತ್ತಿರುವುದು ಬೆಳಕಿಗೆ ಬಂದಿದ್ದು, ಈ ಹಿಂದೆ ಮಂಗಳೂರಿನ ಪಬ್‌ನಲ್ಲಿ ಎಂಟು ಹುಡುಗರು ಮತ್ತು ಹುಡುಗಿಯರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಕಂಡುಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಮದ್ಯ ಸೇವನೆ ಮಾಡುವುದು ಕಾನೂನಿಗೆ ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಮಕ್ಕಳನ್ನು ಬಾರ್ ನಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದಾಗಲಿ, ಮಕ್ಕಳಿಗೆ ಮದ್ಯವನ್ನು ನೀಡುವುದಾಗಲಿ ಮಾಡುವಂತಿಲ್ಲ ಎಂಬ ನಿಯಮವೂ ಇದೆ. ಆದರೂ ಅಪ್ರಾಪ್ತರು ಬಾರ್ ನಲ್ಲಿ ಮದ್ಯವನ್ನು ಖರೀದಿಸುತ್ತಿದ್ದಾರೆ. ಇದಕ್ಕಾಗಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶವನ್ನು ಮಾಡಿದ್ದಾರೆ.

ಶುಕ್ರವಾರ ಈ ಪೊಲೀಸ್ ಸುತ್ತೋಲೆಯನ್ನು ಸಾರ್ವಜನಿಕಗೊಳಿಸಲಾಗಿದೆ. ಮಂಗಳೂರು ಪೊಲೀಸರು ಕೈಗೊಂಡಿರುವ ಕ್ರಮದ ವರದಿಯನ್ನು ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಡಿಜಿ ಮತ್ತು ಐಜಿಪಿ ಕಚೇರಿಯ ಆವರಣದಲ್ಲಿರುವ ಎಡಿಜಿಪಿ ಕಚೇರಿಗೆ ಭಾನುವಾರದೊಳಗೆ ಸಲ್ಲಿಸುವ ಸಾಧ್ಯತೆಯಿದೆ.

ಅಲೋಕ್ ಕುಮಾರ್ ಆದೇಶದಲ್ಲೇನಿದೆ?
ಬಾರ್, ಪಬ್, ಮದ್ಯದಂಗಡಿಗಳಿಗೆ ಅಪ್ರಾಪ್ತ ವಯಸ್ಕರು ಪ್ರವೇಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಾರ್, ಪಬ್, ಮದ್ಯದಂಗಡಿಗಳಲ್ಲಿ ಮಾದಕ ದ್ರವ್ಯ ಸಾಗಣಿಕೆ ಮತ್ತು ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಬೇಕು. ಬಾರ್, ಪಬ್, ಮದ್ಯದಂಗಡಿಗಳ ಲೈಸನ್ಸ್‌ಗಳಲ್ಲಿ ನಿಗದಿಪಡಿಸಿದ ಸಮಯದಂತೆ ಕಡ್ಡಾಯವಾಗಿ ಅಂಗಡಿಗಳನ್ನು ಮುಚ್ಚುವಂತೆ ಕ್ರಮವನ್ನು ವಹಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಪಬ್‌ಗಳಲ್ಲಿ ಅಳವಡಿಸಿರುವ ಧ್ವನಿವರ್‍ಧಕಗಳನ್ನು ರಾತ್ರಿ 10.00ಗಂಟೆಯೊಳಗಾಗಿ ನಿಲ್ಲಿಸಿ ಶಬ್ದ ಮಾಲಿನ್ಯ ಉಂಟಾಗದಂತೆ ಕ್ರಮ ಜರುಗಿಸಬೇಕು ಎಂದು ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೊರತುಪಡಿಸಿ ಉಳಿದ ಎಲ್ಲಾನಗರದ ಆಯುಕ್ತರಿಗೆ , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಕ್ರಮವನ್ನು ಕೈಗೊಳ್ಳಲು ಸೂಚನೆಯನ್ನು ನೀಡಿದ್ದು. ಜುಲೈ 31ರೊಳಗೆ ಕ್ರಮವನ್ನು ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಸೂಚನೆಯನ್ನು ನೀಡಲಾಗಿದೆ. ಇದೇ ಸೋಮವಾರ ರಾತ್ರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಂಗಳೂರಿನ ಪಬ್‌ಗೆ ನುಗ್ಗಿ ವಿದ್ಯಾರ್ಥಿಗಳ ಕೂಟಕ್ಕೆ ಅಡ್ಡಿಪಡಿಸಿದ್ದರು. ಈ ವೇಳೆ  ಪಾರ್ಟಿಯಲ್ಲಿ ಅಪ್ರಾಪ್ತರು ಇದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿ ಆರೋಪಿಸಿದ್ದರು. 

ಕರ್ನಾಟಕ ಅಬಕಾರಿ ಇಲಾಖೆಯು 2015 ರಲ್ಲಿ ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರ ಸೆಕ್ಷನ್ 10 ರ ಅಡಿಯಲ್ಲಿ ಕನಿಷ್ಠ ಕುಡಿಯುವ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಸಿತು. ಅಪ್ರಾಪ್ತ ವಯಸ್ಕರಿಗೆ ಮದ್ಯವನ್ನು ಬಡಿಸುವುದು ಕರ್ನಾಟಕ ಅಬಕಾರಿ ಕಾಯಿದೆ, 1965 ಮತ್ತು ಕರ್ನಾಟಕ ಪೊಲೀಸ್ ಕಾಯಿದೆ, 1963 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೆ ಮದ್ಯವು ಕರ್ನಾಟಕ ಅಬಕಾರಿ ನಿಯಮಗಳ ಉಲ್ಲಂಘನೆಯಾಗಿದೆ. 2015ರ ಬಾಲಾಪರಾಧ ನ್ಯಾಯ ಮಸೂದೆಯ ತಿದ್ದುಪಡಿಯ ಪ್ರಕಾರ, ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com