ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ಪ್ರಕರಣ: ಜನಾಕ್ರೋಶಕ್ಕೆ ಬೊಮ್ಮಾಯಿ ಮಾಡೆಲ್ ಛಿದ್ರವಾಯಿತೆ? ಎಂದ ಕಾಂಗ್ರೆಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದಿಂದೇಚೆಗೆ 3ನೇ ಕೊಲೆ ನಡೆದಿದ್ದು, ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಮಂಗಳೂರು ಹೊರವಲಯ ಸುರತ್ಕಲ್ ನಲ್ಲಿ ಕಳೆದ ರಾತ್ರಿ ಫಾಜಿಲ್ ಮಂಗಲಪೇಟೆ ಎಂಬ 23 ವರ್ಷದ ಮುಸ್ಲಿಂ ಯುವಕನನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಕೊಂದಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊಲೆಯಾಗಿದೆ. ಸುರತ್ಕಲ್‌ನಲ್ಲಿ ಫಾಜಿಲ್ ಎಂಬ ಯುವಕನ ಹತ್ಯೆಯು ಈ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಹಿಡಿದ ಕನ್ನಡಿ. ಬಿಗುವಿನ ವಾತಾವರಣವಿದ್ದರೂ ಸಹ ಗೃಹ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೋತಿದೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಸವರಾಜ ಬೊಮ್ಮಾಯಿ ಅವರೇ, ನೀವು ಆ ಭಾಗದಲ್ಲಿ ಇರುವಾಗಲೇ ನಡೆದಿರುವ ಈ ಕೊಲೆಗೆ ನಿಮ್ಮ ವೈಫಲ್ಯವೇ ನೇರ ಹೊಣೆ. "ಆಕ್ಷನ್‌ಗೆ ರಿಯಾಕ್ಷನ್ ಸಹಜ' ಎನ್ನುವ ಮೂಲಕ ಕ್ರಿಮಿನಲ್‌ಗಳಿಗೆ ಕುಮ್ಮಕ್ಕು ಕೊಡುವ ಮೂಲಕ ನಿಮ್ಮೊಳಗಿನ ತಣ್ಣನೆಯ ಕ್ರೌರ್ಯ ತೋರಿದ್ದಿರಿ. ಜನಾಕ್ರೋಶವನ್ನು ತಣಿಸುವ ಸಲುವಾಗಿ ಯೋಗಿ ಮಾಡೆಲ್ ತರುತ್ತೇವೆ ಎಂದಿದ್ದೀರಿ. ಅಂದರೆ, 'ಬೊಮ್ಮಾಯಿ ಮಾಡೆಲ್' ರಾಜ್ಯದಲ್ಲಿ ವಿಫಲವಾಗಿದೆ ಎಂದು ಒಪ್ಪಿಕೊಂಡಂತಾಗಿದೆ ಅಲ್ಲವೇ? ಎಂದು ಪ್ರಶ್ನಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸರಣಿ ಕೊಲೆ ಪ್ರಕರಣ ಸಂಬಂಧ ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ, 'ಕಾಂಗ್ರೆಸ್ ಸರ್ಕಾರವಿದ್ದರೆ, ರಸ್ತೆಯಲ್ಲಿ ನಿಂತು ಕಲ್ಲು ಹೊಡೆಯಬಹುದಿತ್ತು. ಏನು ಮಾಡೋದು ನಮ್ಮದೇ ಸರ್ಕಾರವಿದೆ. ಒಳಗೆ ಹೇಳಿಕೊಳ್ಳಬೇಕು' ಎಂದಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, 'ಕಾಂಗ್ರೆಸ್ ಸರ್ಕಾರವಿದ್ದಾಗ ಕಲ್ಲು ಹೊಡೆದ, ಸಾರ್ವಜನಿಕ ಆಸ್ತಿಗಳನ್ನು ಹಾಳುಗೆಡವಿದ ಭವ್ಯ ಇತಿಹಾಸವನ್ನೇ ಹೊಂದಿದೆ ಬಿಜೆಪಿ!. ಅಂದು ನಾವು ಬುಲ್ಡೋಸರ್ ಹತ್ತಿಸಿದ್ದರೆ ಇಂದು ಈ ಸಮಾಜಘಾತುಕರು ಚಿಗುರುತ್ತಿರಲಿಲ್ಲ. ಆದರೆ, ನಾವು ಸಂವಿಧಾನದ ವಿರುದ್ಧ ವರ್ತಿಸುವ ತಪ್ಪು ಮಾಡಲಿಲ್ಲ. ಈಗ ಅವರ ವಿರುದ್ಧವೇ ಜನಾಕ್ರೋಶದ ಕಲ್ಲುಗಳು ಬೀಳುತ್ತಿವೆ ಎಂದಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಕರ್ನಾಟಕದಲ್ಲಿ ಬಸವಣ್ಣನ ಮಾಡೆಲ್ ಇದೆ, ಕುವೆಂಪು ಮಾಡೆಲ್ ಇದೆ, ನಾರಾಯಣಗುರುಗಳ ಮಾಡೆಲ್ ಇದೆ, ದೇವರಾಜ್ ಅರಸರ ಮಾಡೆಲ್ ಇದೆ. ಇವುಗಳನ್ನು ಬಿಟ್ಟು ಯುಪಿ ಮಾಡೆಲ್ ತರುತ್ತೇವೆ ಎನ್ನುವ ಬಸವರಾಜ ಬೊಮ್ಮಾಯಿ ಅವರೇ, ಇದರರ್ಥ ಇಲ್ಲಿನ ಯುವಕರನ್ನು ಪರರಾಜ್ಯಗಳಿಗೆ ಪಾನಿಪುರಿ ಮಾರಲು ಕಳಿಸುವುದೇ?! ಜನಾಕ್ರೋಶಕ್ಕೆ ಬೊಮ್ಮಾಯಿ ಮಾಡೆಲ್ ಛಿದ್ರವಾಯಿತೆ? ಎಂದು ಟೀಕಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com