ಆಫ್ರಿಕನ್ ಹಂದಿ ಜ್ವರದ ಭೀತಿ: ಕೊಡಗಿನಲ್ಲಿ ಅಂತಾರಾಜ್ಯ ಹಂದಿ ಮಾಂಸ ಸಾಗಣೆ ನಿಷೇಧ
ಕೇರಳದ ಕೆಲವು ಜಿಲ್ಲೆಗಳಲ್ಲಿ ಆಫ್ರಿಕನ್ ಹಂದಿ ಜ್ವರ(ಎಎಸ್‌ಎಫ್) ಪತ್ತೆಯಾದ ಹಿನ್ನೆಲೆಯಲ್ಲಿ, ಹಂದಿ ಜ್ವರ ಹರಡುವುದನ್ನು ನಿಯಂತ್ರಿಸಲು ಕೊಡಗಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂತಾರಾಜ್ಯ ಹಂದಿ ಮಾಂಸ ಸಾಗಣೆ ನಿಷೇಧಿಸಲಾಗಿದೆ.
Published: 31st July 2022 11:43 PM | Last Updated: 31st July 2022 11:43 PM | A+A A-

ಸಾಂದರ್ಭಿಕ ಚಿತ್ರ
ಮಡಿಕೇರಿ: ಕೇರಳದ ಕೆಲವು ಜಿಲ್ಲೆಗಳಲ್ಲಿ ಆಫ್ರಿಕನ್ ಹಂದಿ ಜ್ವರ(ಎಎಸ್‌ಎಫ್) ಪತ್ತೆಯಾದ ಹಿನ್ನೆಲೆಯಲ್ಲಿ, ಹಂದಿ ಜ್ವರ ಹರಡುವುದನ್ನು ನಿಯಂತ್ರಿಸಲು ಕೊಡಗಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂತಾರಾಜ್ಯ ಹಂದಿ ಮಾಂಸ ಸಾಗಣೆ ನಿಷೇಧಿಸಲಾಗಿದೆ.
ಕೊಡಗು ಪಶುವೈದ್ಯಕೀಯ ಇಲಾಖೆಯು ಅಂತರರಾಜ್ಯ ಹಂದಿಮಾಂಸ ಮಾರಾಟ ಮತ್ತು ಸಾಗಣೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಹಂದಿ ಕೊಲ್ಲುವ ಪ್ರಕ್ರಿಯೆ ಆರಂಭ
ಕೇರಳದಲ್ಲಿ ದೇಶೀಯ ಹಂದಿಗಳ ದೊಡ್ಡ ಜನಸಂಖ್ಯೆಯು ಎಎಸ್ಎಫ್ ಸೋಂಕಿಗೆ ಒಳಗಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಂತಾರಾಜ್ಯ ಹಂದಿಗಳ ಸಾಗಣೆಯನ್ನು ನಿಷೇಧಿಸಿ ಜಿಲ್ಲಾ ಪಶು ವೈದ್ಯಕೀಯ ಇಲಾಖೆ ಅಧಿಸೂಚನೆ ಹೊರಡಿಸಿದೆ.
“ಕೊಡಗು ಸಾಮಾನ್ಯವಾಗಿ ನೆರೆಯ ಕೇರಳ ರಾಜ್ಯಕ್ಕೆ ಹಂದಿ ಮಾಂಸವನ್ನು ಪೂರೈಸುತ್ತದೆ. ಆದರೆ, ಮುಂಜಾಗ್ರತಾ ಕ್ರಮವಾಗಿ ಮಾಂಸ ಸಾಗಣೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಜಿಲ್ಲೆಯ ಚೆಕ್‌ಪೋಸ್ಟ್‌ಗಳಿಗೆ ಇಲಾಖೆಯ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಅವರು ಎಎಸ್‌ಎಫ್ ಹರಡುವುದನ್ನು ತಡೆಯಲು ನಿಗಾ ವಹಿಸುತ್ತಾರೆ ಎಂದು ಜಿಲ್ಲಾ ಪಶುವೈದ್ಯಕೀಯ ಇಲಾಖೆಯ ಡಿಡಿ ಡಾ.ಸುರೇಶ್ ಭಟ್ ತಿಳಿಸಿದ್ದಾರೆ.
ಯಾವುದೇ ಹಂದಿಗಳು ವೈರಸ್ ಸೋಂಕಿಗೆ ಒಳಗಾಗಿದ್ದರೆ ಇಲಾಖೆಗೆ ತಕ್ಷಣ ವರದಿ ಮಾಡುವಂತೆ ಜಿಲ್ಲೆಯ ಹಂದಿ ಸಾಕಾಣಿಕೆದಾರರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಎಎಫ್‌ಎಸ್ ಹಂದಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ ಮತ್ತು ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಡಾ.ಸುರೇಶ್ ಹೇಳಿದ್ದಾರೆ.