'ಆಕ್ಸಿಡೆಂಟಲ್ ಸಿಎಂ' ಆಗಿರುವ ಬೊಮ್ಮಾಯಿ ಅವರ ಡಬಲ್ ಇಂಜಿನ್ ಸರ್ಕಾರಕ್ಕೆ ಆ್ಯಕ್ಸಿಡೆಂಟ್: ಕಾಂಗ್ರೆಸ್ ಟೀಕೆ

ಬಿಜೆಪಿ ಸರ್ಕಾರ ರೈತರ ಮತ್ತು ವಿದ್ಯಾರ್ಥಿಗಳ ವಿಶ್ವಾಸ ಗಳಿಸಲಿಲ್ಲ, ಬಡವರ ವಿಶ್ವಾಸ ಗಳಿಸಲಿಲ್ಲ, ಹೂಡಿಕೆದಾರರ ವಿಶ್ವಾಸ ಗಳಿಸಲಿಲ್ಲ, ಉದ್ಯೋಗಾಕಾಂಕ್ಷಿಗಳ ವಿಶ್ವಾಸ ಗಳಿಸಲಿಲ್ಲ, ಕನಿಷ್ಠ ತಮ್ಮದೇ ಪಕ್ಷದ ಕಾರ್ಯಕರ್ತರ ವಿಶ್ವಾಸವನ್ನೂ ಉಳಿಸಿಕೊಳ್ಳಲಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಇನ್ನೂ ಏಕೆ ಕುರ್ಚಿ ಆಸೆ? ಎಂದು ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಬೊಮ್ಮಾಯಿಯವರ ಆಡಳಿತಕ್ಕೆ ಅವರದ್ದೇ ಪಕ್ಷದ ಕಾರ್ಯಕರ್ತರು ಮೌಲ್ಯಮಾಪನ ಮಾಡಿ "ಫೇಲ್" ಎಂಬ ತೀರ್ಪು ಕೊಟ್ಟಿದ್ದಾರೆ. ಅವರದ್ದೇ ಪಕ್ಷದ ಶಾಸಕರು ಸಚಿವರಿಗೆ ಹಲವು ಬಾರಿ ಸೊನ್ನೆ ಮಾರ್ಕ್ಸ್ ಕೊಟ್ಟಿದ್ದಾರೆ. 'ಆಕ್ಸಿಡೆಂಟಲ್ ಸಿಎಂ' ಆಗಿರುವ ಬೊಮ್ಮಾಯಿ ಅವರ ಡಬಲ್ ಇಂಜಿನ್ ಸರ್ಕಾರ ಆಕ್ಸಿಡೆಂಟ್ ಆಗಿ ನಿಂತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರ ರೈತರ ಮತ್ತು ವಿದ್ಯಾರ್ಥಿಗಳ ವಿಶ್ವಾಸ ಗಳಿಸಲಿಲ್ಲ, ಬಡವರ ವಿಶ್ವಾಸ ಗಳಿಸಲಿಲ್ಲ, ಹೂಡಿಕೆದಾರರ ವಿಶ್ವಾಸ ಗಳಿಸಲಿಲ್ಲ, ಉದ್ಯೋಗಾಕಾಂಕ್ಷಿಗಳ ವಿಶ್ವಾಸ ಗಳಿಸಲಿಲ್ಲ, ಕನಿಷ್ಠ ತಮ್ಮದೇ ಪಕ್ಷದ ಕಾರ್ಯಕರ್ತರ ವಿಶ್ವಾಸವನ್ನೂ ಉಳಿಸಿಕೊಳ್ಳಲಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಇನ್ನೂ ಏಕೆ ಕುರ್ಚಿ ಆಸೆ ಎಂದು ರಾಜೀನಾಮೆಗೆ ಒತ್ತಾಯಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಹೆಣದ ಮೇಲೆ ಹಣ ಎಸೆಯುವುದು ಸಂಪ್ರದಾಯ. ಆದರೆ, ಹೆಣದ ಮೇಲೆ ಹಣ ಮಾಡುವುದು ಬಿಜೆಪಿ ಸಂಪ್ರದಾಯ! 40% ಕಮಿಷನ್ ಸಿಗುವುದಿಲ್ಲವೆಂದು ಕಾರ್ಯಕರ್ತರ ಹಣ ಸಂಗ್ರಹಕ್ಕೆ ಅಡ್ಡಗಾಲು ಹಾಕಿದ್ದೇ ಇಷ್ಟು ದಿನ ನಾಯಕರ ನಡುವೆ ಇದ್ದ ಬಿಜೆಪಿvsಬಿಜೆಪಿ ಕದನ. ಈಗ ಕಾರ್ಯಕರ್ತರು vs ನಾಯಕರ ನಡುವೆ ಶುರುವಾಗಿದೆ! ಬಿಜೆಪಿ ಈಗ ಮುಳುಗಿದ ಹಡಗು! ಎಂದು ಟೀಕಿಸಿದೆ.

ಬಿಜೆಪಿ ಕಾರ್ಯಕರ್ತರಿಗೆ 'ಮೆಚ್ಯುರಿಟಿ ಕಡಿಮೆ' ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಆದರೆ, ನಮ್ಮದು ಕಾರ್ಯಕರ್ತರ ಪಕ್ಷ ಎಂದುಕೊಳ್ಳುವ ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ರಕ್ಷಣೆಯೂ ಇಲ್ಲ, ಗೌರವವೂ ಇಲ್ಲ ಎನ್ನುವುದು ಅನಾವರಣಗೊಂಡಿದೆ! ಕಮಿಷನ್ ಲೂಟಿ ನಡೆಸುವ ಬಿಜೆಪಿ ತೊರೆದು, ಬದುಕು ಕಟ್ಟಿಕೊಳ್ಳುವ ಪ್ರಬುದ್ಧತೆ ಬಿಜೆಪಿ ಕಾರ್ಯಕರ್ತರಿಗೆ ಬರಲಿ ಎಂದಿದೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೇ ಬೊಮ್ಮಾಯಿ ಅವರ ವಿಫಲ ಆಡಳಿತವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ! ಎಂದು ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಕೊಲೆಗಾರರಿಗೆ ರಾಜಮರ್ಯಾದೆ ಸಿಗುತ್ತದೆ, ಜನತೆಗೆ ರಕ್ಷಣೆ ಮರೀಚಿಕೆಯಾಗಿದೆ ಎನ್ನುವುದು ಇವರ ಮಾತಿನ ಅರ್ಥ. ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಕಾರ್ಯಕರ್ತರು, ಶಾಸಕರು, ನಾಯಕರಿಂದ ಆಡಳಿತದ ಪಾಠ ಹೇಳಿಸಿಕೊಂಡು ಇರಬೇಕೆ ಎಂದು ಪ್ರಶ್ನಿಸಿದೆ.

ಗೃಹಸಚಿವರ ನಿವಾಸಕ್ಕೆ ರಕ್ಷಣೆ ಇಲ್ಲ. ಬಿಜೆಪಿಯಲ್ಲಿ ಕಾರ್ಯಕರ್ತರಿಗೇ ಮರ್ಯಾದೆ ಇಲ್ಲ. ಜನ ಸಾಮಾನ್ಯರ ಗೋಳು ಕೇಳೋರಿಲ್ಲ. ಸರ್ಕಾರದಲ್ಲಿನ ಮಂತ್ರಿಗಳಿಗೆ ಮತಿ ಇಲ್ಲ. ಬೊಮ್ಮಾಯಿ ಅವರೇ, ರಾಜ್ಯದಲ್ಲಿ ಈ ಮಟ್ಟಿಗೆ ಅರಾಜಕತೆ ಸೃಷ್ಟಿಯಾದರೂ ನೀವು ಕುರ್ಚಿ ಮೇಲೆ  ಕುಳಿತಿರುವುದು ರಾಜ್ಯಕ್ಕೆ ಕಳಂಕ ಎಂದಿದೆ.

ಅಲ್ಲದೆ, ಸಚಿವರ ನಿವಾಸಗಳಿಗೆ ಭದ್ರತೆ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್, ಜನರನ್ನು ಸಾಯಲು ಬಿಟ್ಟು ಸರ್ಕಾರದವರು ರಕ್ಷಣೆ ಪಡೆಯುತ್ತಿದ್ದಾರೆ ಅದೂ ಸ್ವಪಕ್ಷದ ಕಾರ್ಯಕರ್ತರ ಭಯದಿಂದ ರಕ್ಷಣೆ ಎನ್ನುವುದು ವಿಪರ್ಯಾಸ! 'ಹಿಂದೂ ರಕ್ಷಣೆ' ಎಂದು ಬಂದ ಬಿಜೆಪಿ ಮಾಡುತ್ತಿರುವುದು ಸ್ವರಕ್ಷಣೆ ಮತ್ತು 40% ಕಮಿಷನ್ ಭಕ್ಷಣೆ! ಎಲ್ಲರ ರಕ್ಷಣೆ ಅಸಾಧ್ಯ ಎಂದ ತೇಜಸ್ವಿ ಸೂರ್ಯ ಅವರೇ, ಇವರೆಲ್ಲರ ರಕ್ಷಣೆ ಹೇಗೆ ಸಾಧ್ಯವಾಯ್ತು? ಎಂದು ಕೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com