ರಾಜ್ಯಕ್ಕೆ ಮುಂಗಾರು ಪ್ರವೇಶ; ಈ ವರ್ಷ ಸಾಮಾನ್ಯ ಮಳೆ: ಹವಾಮಾನ ಇಲಾಖೆ
ಕರ್ನಾಟಕಕ್ಕೆ ನೈರುತ್ಯ ಮುಂಗಾರು ಆಗಮನವಾಗಿರುವುದನ್ನು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಖಚಿತಪಡಿಸಿದ್ದು, ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಈಗಾಗಲೇ ಪರಿಶೀಲನಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.
Published: 01st June 2022 11:04 AM | Last Updated: 01st June 2022 01:33 PM | A+A A-

ನಗರದಲ್ಲಿ ಮಂಗಳವಾರ ಮಳೆ ಸುರಿದಿರುವುದು.
ಬೆಂಗಳೂರು: ಕರ್ನಾಟಕಕ್ಕೆ ನೈರುತ್ಯ ಮುಂಗಾರು ಆಗಮನವಾಗಿರುವುದನ್ನು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಖಚಿತಪಡಿಸಿದ್ದು, ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಈಗಾಗಲೇ ಪರಿಶೀಲನಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ದಕ್ಷಿಣ ಪೆನಿನ್ಸುಲಾ ಪ್ರದೇಶದ ಅಡಿಯಲ್ಲಿ ಕರ್ನಾಟಕ ಬರಲಿದ್ದು, ಈ ವರ್ಷ ರಾಜ್ಯವು ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚು (ಶೇ.82ರಷ್ಟು) ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಇದನ್ನೂ ಓದಿ: ಮುಂಗಾರಿನಲ್ಲಿ ದೇಶದಲ್ಲಿ ಭಾರಿ ಮಳೆ ಸಂಭವ: ಹವಾಮಾನ ಇಲಾಖೆ ಮುನ್ಸೂಚನೆ
ಕರ್ನಾಟಕಕ್ಕೆ ಮೇ 31ರಂದು ಮುಂಗಾರು ಆಗಮಿಸಿದೆ. ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿ ಮೋಡಗಳು ಕಡಿಮೆ ಮಟ್ಟದಲ್ಲಿ ಚಲಿಸುತ್ತಿರುವುದು ಮಾನ್ಸೂನ್ ಆಗಮನದ ಸೂಚನೆಯಾಗಿದೆ. ಕಾರವಾರ, ಚಿಕ್ಕಮಗಳೂರು, ಬೆಂಗಳೂರು ಮತ್ತಿತರ ಪ್ರದೇಶಗಳಲ್ಲಿ ಮಳೆಯಾಗಿದೆ ಎಂದು ಬೆಂಗಳೂರಿನ ಐಎಂಡಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.
ಏತನ್ಮಧ್ಯೆ, ರಾಜ್ಯ ಸರ್ಕಾರವು ಮಾನ್ಸೂನ್‌ನಿಂದ ಉಂಟಾಗುವ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಎಲ್ಲಾ ರೀತಿಯ ಕ್ರಮಗಳ ಕೈಗೊಳ್ಳಲಾಗಿದೆ ಎಂದು ಹೇಳಿದೆ.
15 ದಿನಗಳ ಹಿಂದೆ ಸಿಎಂ ಮತ್ತು ಕಂದಾಯ ಸಚಿವರು ಸಭೆ ನಡೆಸಿದ್ದು, ದುರ್ಬಲ ಪ್ರದೇಶಗಳನ್ನು ಗುರುತಿಸುವುದು, ಅಗ್ನಿಶಾಮಕ ಮತ್ತು ತುರ್ತು ಇಲಾಖೆ ಸಿಬ್ಬಂದಿ ಮತ್ತು ಗೃಹ ರಕ್ಷಕರನ್ನು ಅಲರ್ಟ್‌ನಲ್ಲಿ ಇರಿಸುವುದು, ರಕ್ಷಣಾ ಪಡೆಗಳ ಸಿದ್ಧವಾಗಿರಿಸುವುದು ಇತ್ಯಾದಿಗಳ ವಿವರವಾದ ಪಟ್ಟಿಯನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಅಧಿಕ ಮುಂಗಾರು ಪೂರ್ವ ಮಳೆ: ಹೆಚ್ಚುವರಿ ನೀರನ್ನು ತಮಿಳು ನಾಡಿಗೆ ಬಿಡುಗಡೆ ಮಾಡಿದ ಕರ್ನಾಟಕ
ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪರಿಶೀಲನಾಪಟ್ಟಿ ರವಾನಿಸಲಾಗಿದೆ, ದುರ್ಬಲ ಪ್ರದೇಶಗಳನ್ನು ಗುರುತಿಸಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಹೇಳಿದ್ದಾರೆ.
ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಆಯುಕ್ತ ಮನೋಜ್ ರಾಜನ್ ಹೇಳಿದ್ದಾರೆ.