
ಮಸೀದಿ ಇದ್ದ ಸ್ಥಳದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿರುವುದು.
ಮಂಗಳೂರು: ಮಂಗಳೂರು ಸಮೀಪದ ಮಳಲಿಯ ಜಾಮಿಯಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಮಂಗಳವಾರ ಆರಂಭಿಸಿದೆ.
ಮಸೀದಿ ನವೀಕರಣ ಸಂದರ್ಭದಲ್ಲಿ ಶತಮಾನಗಳಷ್ಟು ಹಳೆಯದಾದ ದೇವಾಲಯವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿದೆ.
ಮಳಲಿ ಮಸೀದಿ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡ ಕೂಡಲೇ ಮಸೀದಿ ಕಮಿಟಿ ವಾದಕ್ಕೆ ವಿಶ್ವ ಹಿಂದೂ ಪರಿಷತ್ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸ್ಥಳದಲ್ಲಿ ದೇವರು ಇರುವುದು ನಿಜ, ದೇವಾಲಯ ನಾಶವಾಗಿದ್ದು ಮರುಸ್ಥಾಪಿಸಬೇಕಿದೆ: ತಾಂಬೂಲ ಪ್ರಶ್ನೆಗೆ ಕೇರಳದ ದೈವಜ್ಞರಿಂದ ಉತ್ತರ
ಮಳಲಿ ಮಸೀದಿಗೆ 700 ವರ್ಷಗಳ ಇತಿಹಾಸವಿದ್ದು, ನಮ್ಮಲ್ಲಿ ಸೂಕ್ತ ದಾಖಲೆ ಇದೆ. ಆದ್ದರಿಂದ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಬೇಕೆಂದು ಮಸೀದಿ ಪರ ವಕೀಲ ಎಂ.ಪಿ.ಶೆಣೈ ವಾದ ಮಂಡಿಸಿದರು.
ವಿಹಿಂಪ ಪರ ವಾದ ಮಂಡಿಸಿದ ವಕೀಲ ಚಿದಾನಂದ ಸರಳಾಯ, ಹಿಂದೂ ಧಾರ್ಮಿಕ ಕೇಂದ್ರ ಇದ್ದ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿವೆ. ಕಾಶಿಯ ಜ್ಞಾನವಾಪಿ ಮಸೀದಿ ಮಾದರಿಯಲ್ಲಿಯೇ ಈ ವಿವಾದ ಇದ್ದು, ಅದೇ ರೀತಿಯಲ್ಲಿ ಈ ವಿವಾದ ಇತ್ಯರ್ಥಕ್ಕೆ ಕೋರ್ಟ್ ಮುಂದಾಗಬೇಕು. ಆ ಸ್ಥಳದಲ್ಲಿ ಉತ್ಖನನ ನಡೆಸಲು ಅನುಮತಿ ನೀಡಬೇಕು. ಈ ಬಗ್ಗೆ ಕೋರ್ಟ್ ಕಮಿಷನ್ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ನವೀಕರಣ ಸಮಯದಲ್ಲಿ ಅಲ್ಲಿ ದೇವಸ್ಥಾನದ ಮಾದರಿ ಸಿಕ್ಕಿದೆ. ಅದರ ಫೋಟೋಗಳನ್ನು ನೀಡಲಾಗಿದೆ. ಆ ಜಾಗದಲ್ಲಿ ಹಿಂದೂ ಧಾರ್ಮಿಕ ಕೇಂದ್ರ ಇದ್ದ ಬಗ್ಗೆ ಸಾಕಷ್ಟು ಐತಿಹಾಸಿಕ ಸಾಕ್ಷ್ಯ ಇದೆ. ಇದೊಂದು ಜ್ಞಾನವಾಪಿ ಮಾದರಿ ಪ್ರಕರಣ, ಸತ್ಯಾಸತ್ಯತೆ ತಿಳಿಯಬೇಕು. ಅದಕ್ಕೆ ಕೂಡಲೇ ಕೋರ್ಟ್ ಕಮಿಷನರ್ ನೇತೃತ್ವದಲ್ಲಿ ಸಮಿತಿ ನೇಮಿಸುವಂತೆ ಮನವಿ ಮಾಡಿದರು.
ಇದನ್ನು ಆಕ್ಷೇಪಿಸಿದ ಮಸೀದಿ ಪರ ವಾದ ಮಂಡಿಸುತ್ತಿರುವ ವಕೀಲ ಶೆಣೈ, ಮಳಲಿ ಜಾಗ ಅದು ಸರ್ಕಾರಿ ಜಾಗ. ಅಲ್ಲಿ ಹಿಂದೆ ಇಲ್ಲಿ ಯಾವ ದೇವಸ್ಥಾನ ಇತ್ತು ಎಂದು ಸಾಕ್ಷ್ಯ ಒದಗಿಸಲಿ. ಮಳಲಿ ಮುಸ್ಲಿಮರು ಹಲವು ವರ್ಷಗಳಿಂದ ಅಲ್ಲಿ ಅವರ ಧಾರ್ಮಿಕ ಕ್ರಿಯೆ ನಡೆಸುತ್ತಿದ್ದಾರೆ. ಮಸೀದಿ ಆಡಳಿತದ ಬಳಿ ಎಲ್ಲಾ ರೀತಿಯ ಜಾಗದ ದಾಖಲೆಗಳೂ ಇವೆ. ಅದರ ಜೊತೆಗೆ ನವೀಕರಣದ ವೇಳೆ ಸ್ಥಳೀಯ ಪಂಚಾಯತ್ ಅನುಮತಿ ಪಡೆಯಲಾಗಿದೆ. ಹೀಗಾಗಿ ಕೂಡಲೇ ನವೀಕರಣ ಕಾಮಗಾರಿ ಮಾಡಲು ಅನುಮತಿ ಕೊಡಿ ಎಂದು ತಿಳಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಸುಜಾತಾ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.