ಪಠ್ಯ ವಾಪಸ್ ಚಳವಳಿ ಟೂಲ್ ಕಿಟ್ನ ಒಂದು ಭಾಗ; ದೇವನೂರರ ಪಠ್ಯವನ್ನು ಈಗಾಗಲೇ ಯುವಕರು ತುಂಬಾ ಓದಿದ್ದಾರೆ: ಪ್ರತಾಪ್ ಸಿಂಹ
ಕಳೆದ ಹದಿನೈದು ವರ್ಷಗಳಿಂದ ಯಾವುದೇ ಸಾಹಿತ್ಯ ಕೃಷಿ ಮಾಡದ ಕಾಂಗ್ರೆಸ್ ಪಕ್ಷದಿಂದ ಉಪಕೃತರಾದ ಸಾಹಿತಿಗಳು ಮಾತ್ರ ತಮ್ಮ ಪಠ್ಯವನ್ನು ಕೈಬಿಡಿ ಎನ್ನುತ್ತಿದ್ದಾರೆ ಎಂದು ಸಾಹಿತಿಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
Published: 02nd June 2022 10:57 AM | Last Updated: 02nd June 2022 02:00 PM | A+A A-

ಪ್ರತಾಪ್ ಸಿಂಹ
ಮೈಸೂರು: ಕಳೆದ ಹದಿನೈದು ವರ್ಷಗಳಿಂದ ಯಾವುದೇ ಸಾಹಿತ್ಯ ಕೃಷಿ ಮಾಡದ ಕಾಂಗ್ರೆಸ್ ಪಕ್ಷದಿಂದ ಉಪಕೃತರಾದ ಸಾಹಿತಿಗಳು ಮಾತ್ರ ತಮ್ಮ ಪಠ್ಯವನ್ನು ಕೈಬಿಡಿ ಎನ್ನುತ್ತಿದ್ದಾರೆ ಎಂದು ಸಾಹಿತಿ ದೇವನೂರ ಮಹಾದೇವ ಸೇರಿದಂತೆ ಅನೇಕ ಸಾಹಿತಿಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯದಿಂದ ತಮ್ಮ ಅಧ್ಯಾಯ ಕೈಬಿಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿರುವ ಸಾಹಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ, ಇವರೆಲ್ಲಾ ಕಾಂಗ್ರೆಸ್ ನಿಂದ ಉಪಕೃತರಾಗಿ ಇವತ್ತು ಪಠ್ಯ ಕೈಬಿಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಂಪನಾಗರಾಜಯ್ಯ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕ ಸಾಹಿತಿಗಳು ಕಳೆದ ಹದಿನೈದು ವರ್ಷದಿಂದ ಯಾವುದೇ ಸಾಹಿತ್ಯ ಕೃಷಿಯನ್ನು ಮಾಡಿಲ್ಲ, ಬರಗೂರು ರಾಮಚಂದ್ರಪ್ಪ ಅವರ ಸಾಹಿತ್ಯ ಕೃತಿ ಯಾವುದು ನೆನಪಿದೆ ಎಂದು ಪ್ರಶ್ನಿಸಿದರು.
ಈಗಾಗಲೇ ಮೂಡ್ನಾಕೂಡು ಚಿನ್ನಸ್ವಾಮಿ, ಜಿ.ರಾಮಕೃಷ್ಣ, ಸರೋಜ ಕಾಟ್ಕರ್, ಅವರೆಲ್ಲರ ಪಠ್ಯ ಕೈಬಿಟ್ಟ ಮೇಲೆ ಪಠ್ಯ ಕೈಬಿಡಿ ಎಂದು ಹೇಳುತ್ತಿದ್ದಾರೆ. ದೇವನೂರ ಮಹಾದೇವ ಅವರ ಪಠ್ಯವನ್ನು ಈಗಾಗಲೇ ಯುವಕರು ತುಂಬಾ ಓದಿದ್ದಾರೆ ಎಂದು ಹೇಳುವ ಮೂಲಕ ಇವರ ಪಠ್ಯ ಕೈಬಿಟ್ಟರೆ ಏನು ಎನ್ನುವ ಅರ್ಥದಲ್ಲಿ ಮಾತನಾಡಿದರು.
ಇದನ್ನೂ ಓದಿ: ಶಾಲಾ ಪಠ್ಯಪುಸ್ತಕಗಳಿಂದ ತಮ್ಮ ಕವನಗಳ ಕೈಬಿಡುವಂತೆ ಶಿಕ್ಷಣ ಸಚಿವರಿಗೆ ಮತ್ತಿಬ್ಬರು ಸಾಹಿತಿಗಳ ಪತ್ರ!
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ಸಿಗರು ವಿನಾಕಾರಣ ಜನರ ಭಾವನೆ ಕೆರಳಿಸುತ್ತಿದ್ದಾರೆ. ಸುಳ್ಳು ಹೇಳಿ ಸಾಹಿತಿಗಳನ್ನೂ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಬಿಜೆಪಿ ವಕ್ತಾರ, ಶಾಸಕ ಪಿ.ರಾಜೀವ ಆಕ್ರೋಶ ವ್ಯಕ್ತಪಡಿಸಿದರು. ಪಠ್ಯಕ್ರಮದಲ್ಲಿ ಏನೇನೋ ಬದಲಾವಣೆ ಮಾಡಲಾಗಿದೆ ಎಂಬುದು ಸುಳ್ಳು. ಸಾಹಿತಿಗಳು ಈ ಕುತಂತ್ರಕ್ಕೆ ಬೆಲೆ ಕೊಡಬಾರದು’ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಬಗ್ಗೆ ನಮಗೆ ಗೌರವವಿದೆ. ರೋಹಿತ್ ಚಕ್ರತೀರ್ಥ ಅವರ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿರೋಧಿಸುವ ಅವರ ನಿಲುವು ಸರಿಯಾದುದಲ್ಲ. ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಿದ್ದರಾಮಯ್ಯ ಅವರನ್ನು ಮೆಚ್ಚಿಸುವ ಉದ್ದೇಶದಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದರು. ಸಿಂಧೂ ಕೊಳ್ಳದ ಸಂಸ್ಕೃತಿಯ ಪಾಠ ಬಿಟ್ಟು ನೆಹರೂ ಕುಟುಂಬದ ಪಾಠ ಸೇರಿಸಿದ್ದರು’ ಎಂದೂ ದೂರಿದರು.