
ಮಾಜಿ ಸಚಿವ ಹೆಚ್ ಡಿ ರೇವಣ್ಣ
ಹಾಸನ: ಹಾಸನದಲ್ಲಿ ಜೆಡಿಎಸ್ ಪಕ್ಷದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಘಟನೆ ನಡೆದ 12 ಗಂಟೆಗಳಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. 16 ನೇ ವಾರ್ಡ್ ನ್ನು ಪ್ರತಿನಿಧಿಸುತ್ತಿದ್ದ ನಾಗರಾಜ್ ಜೂ.1 ರಂದು ಮನೆಗೆ ತೆರಳುತ್ತಿದ್ದಾಗ ಅವರನ್ನು ಹತ್ಯೆ ಮಾಡಲಾಗಿತ್ತು.
ಹಾಸನದ ಹೊಸಲೈನ್ ರಸ್ತೆಯ ಅರುಣ್ ಹಾಗೂ ಪೂರ್ಣಚಂದ್ರ ಬಂಧನಕ್ಕೊಳಗಾಗಿದ್ದು, ಕೃತ್ಯಕ್ಕೆ ಬಳಸಲಾದ ಆಟೋ ರಿಕ್ಷಾ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಡಿವೈಎಸ್ ಪಿ ಉದಯ್ ಭಾಸ್ಕರ್, ಸರ್ಕಲ್ ಇನ್ಸ್ಪೆಕ್ಟರ್ ರೇಣುಕಾ ಪ್ರಸಾದ್ ಹಾಗೂ ಸುರೇಶ್ ಅವರ ಕಾರ್ಯವೈಖರಿ, ನಿರ್ಲಕ್ಷ್ಯದ ಬಗ್ಗೆ ಮಾಜಿ ಸಚಿವ ರೇವಣ್ಣ ಗಂಭೀರ ಆರೋಪ ಮಾಡಿದ್ದರಿಂದ ಉಂಟಾಗಿದ್ದ ಒತ್ತಡದಿಂದಾಗಿ ಈ ಅಧಿಕಾರಿಗಳನ್ನು ಎಸ್ ಪಿ ಶ್ರೀನಿವಾಸಗೌಡ ಅವರಿಗೆ ನೊಟೀಸ್ ಜಾರಿಗೊಳಿಸಿದ್ದಾರೆ.
ಪ್ರಶಾಂತ್ ನಾಗರಾಜ್ ಅವರ ಪಾರ್ಥಿವ ಶರೀರವಿದ್ದ ಜಿಲ್ಲಾ ಆಸ್ಪತ್ರೆ ಬಳಿ ನಡೆದ ಧರಣಿಯಲ್ಲಿ ಮಾತನಾಡಿದ ರೇವಣ್ಣ, ಹಾಸನ ಡಿವೈಎಸ್ ಪಿ ಉದಯ್ ಭಾಸ್ಕರ್, ಸರ್ಕಲ್ ಇನ್ಸ್ಪೆಕ್ಟರ್ ರೇಣುಕಾ ಪ್ರಸಾದ್ ಹಾಗೂ ಸುರೇಶ್ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದರು. ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಧರಣಿ ಸ್ಥಳದಿಂದ ತೆರಳುವುದಿಲ್ಲ ಎಂದು ರೇವಣ್ಣ ಪಟ್ಟು ಹಿಡಿದಿದ್ದರು. ಕೊನೆಗೆ ಎಸ್ ಪಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ರೇವಣ್ಣ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.