ಬೆಂಗಳೂರು ಅವಳಿ ಗೋಪುರ ನಿರ್ಮಾಣಕ್ಕೆ ಜಾಗತಿಕ ಟೆಂಡರ್ ಕರೆಯಲು ಸರ್ಕಾರ ಮುಂದು
ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಫ್ಲೈಓವರ್ ಬಳಿ ಸರ್ಕಾರಿ ಕಚೇರಿಗಳಿಗಾಗಿ ಉದ್ದೇಶಿತ 50 ಅಂತಸ್ತಿನ ಅವಳಿ ಗೋಪುರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾಗತಿಕ ಟೆಂಡರ್ ಕರೆಯಲು ಚಿಂತನೆ ನಡೆಸುತ್ತಿದೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವ ಸಿಸಿ ಪಾಟೀಲ್ ಅವರು ಶುಕ್ರವಾರ ಹೇಳಿದ್ದಾರೆ.
Published: 04th June 2022 08:21 AM | Last Updated: 04th June 2022 08:21 AM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಫ್ಲೈಓವರ್ ಬಳಿ ಸರ್ಕಾರಿ ಕಚೇರಿಗಳಿಗಾಗಿ ಉದ್ದೇಶಿತ 50 ಅಂತಸ್ತಿನ ಅವಳಿ ಗೋಪುರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾಗತಿಕ ಟೆಂಡರ್ ಕರೆಯಲು ಚಿಂತನೆ ನಡೆಸುತ್ತಿದೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವ ಸಿಸಿ ಪಾಟೀಲ್ ಅವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರರ್ಶಕತೆ ಹಾಗೂ ಗುಣಮಟ್ಟವನ್ನು ಖಚಿತಪಡಿಸಲು ಮೆಗಾ ಯೋಜನೆಯನ್ನು ಕೈಗೆತ್ತಿಕೊಳ್ಳಲು ಜಾಗತಿಕ ಟೆಂಡರ್ ಕರೆಯಲು ಸರ್ಕಾರ ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
"ಇದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿದ ನಂತರ ನಿರ್ಧರಿಸಲಾಗುತ್ತದೆ. ಪ್ರಸ್ತುತ ಸರ್ಕಾರವು ವಿಧಾನ ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಗಳಲ್ಲಿ ಕಾರ್ಯನಿರತವಾಗಿವೆ. ಚುನಾವಣೆ ಮುಗಿದ ಈ ಕುರಿತು ನಿರ್ಧಾರ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕ ಮತ್ತು ಆರ್ಥಿಕ ನಿರ್ಬಂಧಗಳು ಸೇರಿದಂತೆ ವಿವಿಧ ಕಾರಣಗಳಿಂದ ಯೋಜನೆಗೆ ಹಿನ್ನಡೆಯುಂಟಾಗಿತ್ತು. ಮೊದಲು ಒಂದು ಗೋಪುರ ಮತ್ತು ಸ್ವಲ್ಪ ಸಮಯದ ನಂತರ ಎರಡನೆಯದನ್ನು ನಿರ್ಮಿಸುವ ಪ್ರಸ್ತಾಪವೂ ಈ ಹಿಂದೆ ಇತ್ತು. ಆದರೆ, ಕೆಲವು ವಾರಗಳ ಹಿಂದೆ ನಡೆದ ಸಭೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅವಳಿ ಗೋಪುರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿತು. ಈ ಯೋಜನೆಯು ನಗರದ ಹೃದಯ ಭಾಗ - ಮೆಜೆಸ್ಟಿಕ್ ಪ್ರದೇಶದಲ್ಲಿ ಬರುವುದರಿಂದ ಬೆಂಗಳೂರಿನ ಪ್ರಮುಖ ಹೆಗ್ಗುರುತಾಗಬೇಕೆಂದು ಬಯಸಲಾಗಿದೆ ಎಂದು ಮಾಹಿತಿ ನೀಡಿದರು.
ಶೀಘ್ರಗತಿಯಲ್ಲಿ ಗೋಪುರ ನಿರ್ಮಾಣ ಮಾಡಬೇಕೆಂದು ಬಯಸುತ್ತಿದ್ದೇವೆ. ಇದರಿಂದ ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಸ್ಥಳದಲ್ಲಿ ಇರಲಿವೆ. ಇದರಿಂದ ಬಾಡಿಗೆ ಹಣವೂ ಉಳಿತಾಯವಾಗಲಿದೆ ಎಂದಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2020ರ ಡಿಸೆಂಬರ್ ತಿಂಗಳಿನಲ್ಲಿ ಈ ಮಹಾತ್ವಾಕಾಂಕ್ಷೆಯ ಯೋಜನೆಗೆ ಸಂಪುಟ ಅನುಮೋದನೆ ನೀಡಿತ್ತು. ರೇಸ್ ಕೋರ್ಸ್ ಮೂಲಕ ವಿಧಾನಸೌಧಕ್ಕೆ ಹೋಗುವ ಮಾರ್ಗವಿದ್ದ ಹಿನ್ನೆಲೆಯಲ್ಲಿ ಕಟ್ಟಡವನ್ನು ಸಮೀಪದ ಕೆಂಪೇಗೌಡ ಮೆಟ್ರೊ ನಿಲ್ದಾಣಕ್ಕೆ ಸಂಪರ್ಕಿಸಲು ಈ ಮೊದಲು ಯೋಜನೆ ರೂಪಿಸಲಾಗಿತ್ತು. ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮವು ಈ ಯೋಜನೆಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಬೇಕಿತ್ತು. ಯೋಜನೆಯ ಅಂದಾಜು ವೆಚ್ಚ 1,250 ಕೋಟಿ ರೂ ಆಗಿದ್ದು, ಕಟ್ಟಡದಲ್ಲಿ 25 ಮೀಟಿಂಗ್ ಹಾಲ್ಗಳನ್ನು ಹೊಂದಲು ಮತ್ತು ರಾಜ್ಯ ಸರ್ಕಾರದ ಇಲಾಖೆಗಳು, ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಕಚೇರಿಗಳಿಗೆ ಶೇ.60ರಷ್ಟು ಸ್ಥಳಾವಕಾಶ ಕಲ್ಪಿಸಲು ಪ್ರಸ್ತಾಪಗಳು ಕೇಳಿ ಬಂದಿವೆ.
ಯೋಜನೆ ಕುರಿತು ಲೋಕೋಪಯೋಗಿ ಇಲಾಖೆಯ ಹಿರಿಯ ಇಂಜಿನಿಯರ್ ಮಾತನಾಡಿ, ಯೋಜನೆಯಲ್ಲಿ ಯಾವುದೇ ಪ್ರಗತಿಗಳು ಕಂಡು ಬಂದಿಲ್ಲ ಎಂದು ಹೇಳಿದ್ದಾರೆ. ಯೋಜನೆ ಸಂಬಂಧ ಯಾವುದೇ ಸಭೆಗಳೂ ನಡೆದಿಲ್ಲ. ಯೋಜನೆ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.