
ಸಾಂದರ್ಭಿಕ ಚಿತ್ರ
ಹಾಸನ: ಸಿಎಂಸಿ ಕೌನ್ಸಿಲರ್ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಪೊಲೀಸರು ಸೋಮವಾರ ಇಬ್ಬರನ್ನು ಬಂಧಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರು, ಪ್ರಾಥಮಿಕ ತನಿಖೆಯ ಪ್ರಕಾರ ಏಳು ಮಂದಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಪೈಕಿ ಇಂದು ಇಬ್ಬರನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳನ್ನುಸಂತೋಷ್ ಮತ್ತು ವಿಶ್ವ ಎಂದು ಗುರುತಿಸಲಾಗಿದೆ. ಬಂಧಿತರಿಂದ ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಹಾಸನದಲ್ಲಿ ನಗರಸಭೆ ಸದಸ್ಯನ ಹತ್ಯೆ: 12 ಗಂಟೆಗಳಲ್ಲಿ ಇಬ್ಬರ ಬಂಧನ
ಅಂತೆಯೇ ಪ್ರಮುಖ ಆರೋಪಿಯನ್ನು ಬಂಧಿಸಿದ ನಂತರವಷ್ಟೇ ಕೊಲೆಗೆ ಕಾರಣವೇನು ಎಂಬುದು ತಿಳಿಯಲಿದೆ ಎಂದ ಅವರು, ವಿಶೇಷ ತಂಡಗಳು ಪ್ರಮುಖ ಆರೋಪಿಗಳು ಮತ್ತು ಇತರ ನಾಲ್ವರನ್ನು ಶೀಘ್ರವಾಗಿ ಬಂಧಿಸಲು ಶೋಧಿಸುತ್ತಿವೆ ಎಂದು ಹೇಳಿದರು. ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಿದ ಬಳಿಕ ಘಟನೆಗೆ ನಿಖರ ಕಾರಣ ತಿಳಿಯಲಿದೆ. ನಾಲ್ವರು ಸದಸ್ಯರ ಸಿಐಡಿ ತಂಡ ಹಾಸನ ನಗರಕ್ಕೆ ಭೇಟಿ ನೀಡಿದ್ದು, ಜಿಲ್ಲಾ ಪೊಲೀಸರಿಂದ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.