
ನವವಿವಾಹಿತೆ ಆತ್ಮಹತ್ಯೆ: ಸಾಫ್ಟ್ ವೇರ್ ಪತಿ ಬಂಧನ
ಬೆಂಗಳೂರು: ಸುಬ್ರಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ ನವ ವಿವಾಹಿತೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.
ಶನಿವಾರ ಪತಿ ಹೊರಗೆ ಹೋಗಿದ್ದಾಗ ಕೊಠಡಿಯಲ್ಲಿ ಅಂಜು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಪತಿ ಅಂಜನ್ ಕಣಿಯಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
‘ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಅಂಜು, ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅರಕಲಗೂಡಿನ ಅಂಜನ್ ಅವರನ್ನು ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.
ತಡರಾತ್ರಿ ಮನೆಗೆ ಹಿಂತಿರುಗಿದ ಕಣಿಯಾರ್ ತನ್ನ ಪತ್ನಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು. ನಂತರ ಪೊಲೀಸರು ಮತ್ತು ಅಂಜು ಪೋಷಕರಿಗೆ ಕರೆ ಮಾಡಿ ಆಕೆಯ ಸಾವಿನ ಬಗ್ಗೆ ಮಾಹಿತಿ ನೀಡಿದರು. ಆಕೆ ಆತ್ಮಹತ್ಯೆ ಪತ್ರ ಬರೆದಿದ್ದು, ತನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ.
ತನಗೆ ಹಲವಾರು ಸಮಸ್ಯೆಗಳಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ಕುರಿತು ಹೇಳಿಕೊಂಡಿದ್ದಾರೆ. ಅಲ್ಲದೆ ಅಮ್ಮನ ಬಳಿ ಕ್ಷಮೆಯಾಚಿಸಿದ್ದಾರೆ. ಹಠ ಮಾಡಿ ಮದುವೆಯಾಗಿ ಇಲ್ಲಿಗೆ ಬಂದೆ. ಇದೀಗ ಅದೇ ಹಠದಿಂದ ಇಲ್ಲಿಂದ ಹೋಗುತ್ತಿರುವುದಾಗಿ ಅಂಜು ಬರೆದಿದ್ದಾರೆ.
ಆದರೆ ಪತಿ ಅಂಜನ್ ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸುಬ್ರಮಣ್ಯಪುರ ಪೊಲೀಸರು ಭಾನುವಾರ ಅಂಜನ್ ಕಣಿಯಾರ್ ನನ್ನು ಬಂಧಿಸಿದ್ದಾರೆ.