
ಚಾಮರಾಜಪೇಟೆ ಈದ್ಗಾ ಮೈದಾನ
ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ‘ಈದ್ಗಾ ಮೈದಾನ’ ವಿವಾದ ತಾರಕಕ್ಕೇರಿರುವಂತೆಯೇ ಈ ಮೈದಾನ ನಮಗೆ ಸೇರಿದ್ದು ಎಂದು ಮುಸ್ಲಿಂ ಅಸೋಸಿಯೇಷನ್ ಹೇಳಿದೆ.
ಚಾಮರಾಜಪೇಟೆಯಲ್ಲಿರುವ ‘ಈದ್ಗಾ ಮೈದಾನ’ ತಮಗೇ ಸೇರಿದ್ದು ಎಂಬುದನ್ನು ಸಾಬೀತುಪಡಿಸಲು ‘ಎಲ್ಲ ದಾಖಲೆಗಳು’ ತಮ್ಮ ಬಳಿ ಇವೆ ಮತ್ತು ಅದನ್ನು ಕೇಳಿದರೆ ಬಿಬಿಎಂಪಿಗೆ ನೀಡುವುದಾಗಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ಬುಧವಾರ ಹೇಳಿಕೊಂಡಿದೆ. ಈ ಮೈದಾನವು ‘ಬಿಬಿಎಂಪಿ ಆಟದ ಮೈದಾನ’ ಎಂದು ಬಿಬಿಎಂಪಿ ಸೋಮವಾರ ಹೇಳಿಕೊಂಡಿದ್ದು, ಮುಸ್ಲಿಮರಿಗೆ ವರ್ಷದಲ್ಲಿ ಎರಡು ಬಾರಿ ಬಳಸಲು ಅನುಮತಿ ನೀಡಲಾಗಿದ್ದು, ಉಳಿದ ದಿನಗಳಲ್ಲಿ ಬಿಬಿಎಂಪಿ ಜಂಟಿ ಆಯುಕ್ತ (ಪಶ್ಚಿಮ) ಅವರಿಗೆ ಬಿಟ್ಟಿದ್ದು, ಆಯಾ ಘಟನೆಗಳ ಆಧಾರದ ಮೇರೆಗೆ ಅವರು ಅನುಮತಿಗಳನ್ನು ನೀಡುತ್ತಾರೆ ಎಂದು ಹೇಳಿದೆ.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ಪಾಲಿಕೆ ಸ್ವತ್ತು, ಯಾವುದೇ ಸಮುದಾಯ ಮೈದಾನವನ್ನು ಬಳಕೆ ಮಾಡಬಹುದು: ಬಿಬಿಎಂಪಿ ಸ್ಪಷ್ಟನೆ
ಈ ಹೇಳಿಕೆಯು ಕೆಲವು ಹಿಂದೂ ಸಂಘಟನೆಗಳ ವಾದಗಳನ್ನು ಅನುಸರಿಸಿ BBMP ಯಿಂದ ಈ ಮೈದಾನವು ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ಹುಟ್ಟುಹಾಕಿದ್ದು, ಮುಸ್ಲಿಮರಿಗೆ ತಮ್ಮ ಹಬ್ಬದ ಕಾರ್ಯಕ್ರಮಗಳನ್ನು ನಡೆಸಲು ವಿಶೇಷ ಪ್ರವೇಶವನ್ನು ಏಕೆ ನೀಡಲಾಯಿತು ಎಂಬುದರ ಕುರಿತು ಸ್ಪಷ್ಟೀಕರಣವನ್ನು ಕೋರಿದೆ ಎಂದು ವರದಿಯಾಗಿದೆ.
ಈ ಕುರಿತು TNIE ನೊಂದಿಗೆ ಮಾತನಾಡಿರುವ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ಪ್ರಧಾನ ಕಾರ್ಯದರ್ಶಿ ಜಹಿರುದ್ದೀನ್ ಅಹ್ಮದ್ ಅವರು, ಈ ವಿವಾದಿತ ಭೂಮಿ 1871 ರಿಂದ CMA ಬಳಿ ಇದೆ. ಕಾರ್ಪೊರೇಷನ್ (ಈಗ BBMP) ಇದು ಸುಪ್ರೀಂ ಕೋರ್ಟ್‌ನಲ್ಲಿ ಮತ್ತು ಹೈಕೋರ್ಟ್‌ನಲ್ಲಿ ತಮ್ಮದು ಎಂದು ಹೇಳಿಕೊಂಡಿದೆ. ಆದರೆ ಈ ಕುರಿತು ವಿಚಾರಣೆಗಳ ತೀರ್ಪು ನಮ್ಮ ಪರವಾಗಿತ್ತು. ಸ್ಮಶಾನ ಭೂಮಿ ಸೇರಿದಂತೆ ಮೂಲತಃ 10.10 ಎಕರೆ ಭೂಮಿ ಇತ್ತು. ಆದರೆ ಪ್ರದೇಶವು ಅಭಿವೃದ್ಧಿ ಹೊಂದುತ್ತಿದ್ದಂತೆ, ಸ್ಮಶಾನ ಸ್ಥಳವನ್ನು ಸ್ಥಳಾಂತರಿಸಲಾಯಿತು. ಈಗ ಈದ್ಗಾ ನಿಂತಿರುವ ಎರಡು ಎಕರೆ ಮತ್ತು ಕೆಲ ಗುಂಟೆ ಭೂಮಿ ಮಾತ್ರ ನಮ್ಮೊಂದಿಗೆ ಉಳಿದಿದೆ. ಯಾರಾದರೂ ಬಯಸಿದರೆ, ನಾವು ದಾಖಲೆಗಳನ್ನು ತೋರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಕ್ರೀದ್: ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ, ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಇತ್ತೀಚೆಗೆ, ಹಿಂದೂ ಬಲಪಂಥೀಯ ಸಂಘಟನೆಯಾದ ಹಿಂದೂ ಜನಜಾಗೃತಿ ಸಮಿತಿಯು 2006 ರಲ್ಲಿ ಶಾಸಕ ಬಿ.ಜೆ.ಜಮೀರ್ ಅಹಮದ್ ಖಾನ್, ಬಿಜೆಪಿ ನಾಯಕಿ ಪ್ರೀಮಿಳಾ ನೇಸರ್ಗಿ, ಶಾಸಕ ಆರ್.ವಿ.ದೇವರಾಜ್, ಡಿಸಿಪಿ ಮತ್ತು ಎಸಿಪಿ ಅವರನ್ನೊಳಗೊಂಡ ಸಮಿತಿಯ ವಿಚಾರಣೆಯಲ್ಲಿ ಈ ಭೂಮಿಯನ್ನು ಗಣೇಶ ಹಬ್ಬ, ದಸರಾ, ಸ್ವಾತಂತ್ರ್ಯ ದಿನಾಚರಣೆ ಮತ್ತಿತರ ಉದ್ದೇಶಗಳಿಗೆ ಇತರರು ಬಳಸಬಹುದು ಎಂದು ವಾದಿಸಿತ್ತು. ಈ ಒಪ್ಪಂದಕ್ಕೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಅವರು ಸಹ ಅಂದು ಸಹಿ ಹಾಕಿದ್ದರು. ಆದರೆ ಈಗ ಇತರೆ ಕಾರ್ಯಕ್ರಮಗಳಿಗೆ ಪಾಲಿಕೆ ಅನುಮತಿ ನೀಡುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಮೋಹನ್ ಗೌಡ ಅವರು ಹೇಳಿದ್ದಾರೆ.
ಈ ಭೂಮಿ ವಕ್ಫ್ ಮಂಡಳಿ ಅಥವಾ ಇತರರಿಗೆ ಸೇರಿದ್ದರೆ.. ಈದ್ಗಾ ಗೋಡೆಯ ಬಿರುಕು ಸರಿಪಡಿಸಲು ಪಾಲಿಕೆಯಿಂದ ದುರಸ್ತಿಗೆ ಮನವಿ ಸಲ್ಲಿಸಿದ್ದರು ಏಕೆ? ಎಂದು ಅವರು ಪ್ರಶ್ನಿಸಿದ್ದು, ಇದಕ್ಕೂ ಸ್ಪಷ್ಟನೆ ನೀಡಿರುವ ಸಿಎಂಎ ಸಮಿತಿಯು 2006ರ ಸಮಿತಿ ಸಭೆಯ ನಡಾವಳಿಗಳನ್ನು ತಿರಸ್ಕರಿಸಿದ್ದು, ಇದು ಗೊಂದಲಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
ಇದನ್ನೂ ಓದಿ: ಕೋಮು ಸೌಹಾರ್ದಕ್ಕಾಗಿ ಸಹಪಂಕ್ತಿ ಭೋಜನ: ಮುಸ್ಲಿಂ, ಕ್ರೈಸ್ತ ಮುಖಂಡರು ಭಾಗಿ
ಏತನ್ಮಧ್ಯೆ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು "ಕೆಲವು ದಾಖಲೆಗಳು" ಭೂಮಿ ನಿಗಮಕ್ಕೆ ಸೇರಿದ್ದು ಎಂದು ತೋರಿಸುತ್ತವೆ ಮತ್ತು ಸುಪ್ರೀಂ ಕೋರ್ಟ್ ಆದೇಶದ ಕೆಲವು ದಾಖಲೆಗಳು ಕಾಣೆಯಾಗಿರುವುದರಿಂದ ಕಾನೂನು ಆಯ್ಕೆಗಳನ್ನು ಹುಡುಕುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.