ಬೆಂಗಳೂರು: ಅಪಾರ್ಟ್ ಮೆಂಟ್ ನ 11ನೇ ಮಹಡಿಯಿಂದ ಜಿಗಿದು ನವ ವಿವಾಹಿತ ವೈದ್ಯ ಆತ್ಮಹತ್ಯೆ
ವೈದ್ಯರೊಬ್ಬರು ತಾವು ವಾಸವಾಗಿದ್ದ ಅಪಾರ್ಟ್‍ಮೆಂಟ್‍ನ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Published: 16th June 2022 07:49 AM | Last Updated: 16th June 2022 01:57 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ವೈದ್ಯರೊಬ್ಬರು ತಾವು ವಾಸವಾಗಿದ್ದ ಅಪಾರ್ಟ್‍ಮೆಂಟ್‍ನ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಪೃಥ್ವಿಕಾಂತ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವರು. ಇವರು ಮೂಲತಃ ಆಂಧ್ರ ಪ್ರದೇಶದವರು. ಮೂರು ತಿಂಗಳ ಹಿಂದೆಯಷ್ಟೇ ಪೃಥ್ವಿಕಾಂತ್ ರೆಡ್ಡಿ ಅವರು ವೈದ್ಯೆಯನ್ನು ವಿವಾಹವಾಗಿದ್ದರು. ಅಮೃತಹಳ್ಳಿ ಮುಖ್ಯರಸ್ತೆ ಯಲ್ಲಿರುವ ಅಪಾರ್ಟ್‍ಮೆಂಟ್‍ನ 11ನೇ ಮಹಡಿಯ ಕಟ್ಟಡದಲ್ಲಿ ದಂಪತಿ ವಾಸಿಸುತ್ತಿದ್ದರು. ಮುಂಜಾನೆ 5 ಗಂಟೆ ಸುಮಾರಿನಲ್ಲಿ 11ನೇ ಮಹಡಿಯಿಂದ ಜಿಗಿದು ಪೃಥ್ವಿಕಾಂತ್ ರೆಡ್ಡಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ, ಪತ್ನಿ ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಆದರೆ ಕಳೆದ ಒಂದು ವಾರದಿಂದ ಪೃಥ್ವಿಕಾಂತ್ ರೆಡ್ಡಿ ಡಲ್ ಆಗಿದ್ದರು. ಪತ್ನಿ ಮಲಗಿದ್ದ ಸಂದರ್ಭವನ್ನು ನೋಡಿಕೊಂಡು ತಾನಿದ್ದ ಅಪಾರ್ಟ್‌ಮೆಂಟ್‌ನ 11 ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಪೊಲೀಸರು ತನಿಖಾ ಭಾಗವಾಗಿ ಆತನ ಮೊಬೈಲ್ ಅನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಬರೆದುಕೊಂಡಿದ್ದ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ತನಗೆ ಮದುವೆಗೆ ಮುಂಚೆಯೇ ಹೃದಯ ಸಂಬಂಧಿ ಕಾಯಿಲೆ ಇದೆ. ಆದರೆ ಈ ವಿಚಾರವನ್ನು ಮದುವೆಗೆ ಮುಂಚೆ ತನ್ನ ಪತ್ನಿಗೆ ತಿಳಿಸಿರಲಿಲ್ಲ. ತನ್ನ ಹೃದ್ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿರುವಾಗ ತಾನು ಬದುಕುವುದು ಮತ್ತು ಎಲ್ಲರಿಗೂ ಹೊರೆಯಾಗುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದ್ದರು. ಯಾವುದೇ ಕೈಬರಹದ ಡೆತ್ ನೋಟ್ ಇಲ್ಲ, ಬದಲಿಗೆ ಆತ ಫೋನ್‌ನಿಂದ ಕಳುಹಿಸಲಾದ ವಾಟ್ಸಾಪ್ ಸಂದೇಶವಿದೆ” ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದರು.
ಕಳೆದ ಐದು ದಿನಗಳಿಂದ ಅವರು ಆಸ್ಪತ್ರೆಗೆ ಹೋಗಿರಲಿಲ್ಲ ಎನ್ನಲಾಗಿದೆ. “ಪೃಥ್ವಿಕಾಂತ್ ರೆಡ್ಡಿ ಅವರು ನರವಿಜ್ಞಾನ ವಿಭಾಗದಲ್ಲಿ ಡಾಕ್ಟರೇಟ್ ಆಫ್ ಮೆಡಿಸಿನ್ ಓದುತ್ತಿದ್ದರು. ರೆಡ್ಡಿ ಉತ್ತಮ ವಿದ್ಯಾರ್ಥಿಯಾಗಿದ್ದರು ಮತ್ತು ಅವರ ಸ್ನೇಹಿತರು ಸೇರಿದಂತೆ ಯಾರಿಗೂ ಅವರ ಆರೋಗ್ಯದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಅವರು ತಮ್ಮ ಅನಾರೋಗ್ಯದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಅವರ ಸಾವು ದುರದೃಷ್ಟಕರ ಎಂದು ಬಿಎಂಆರ್‌ಸಿಐ ನಿರ್ದೇಶಕ ಕಮ್ ಡೀನ್ ಡಾ.ರವಿ ಕೆ ತಿಳಿಸಿದ್ದಾರೆ.