ಬಿಡಿಎಯಲ್ಲಿ ಗ್ರೂಪ್ ಡಿ ನೌಕರ; ಮಾಡಿಟ್ಟ ಆಸ್ತಿ ಕೋಟಿ ಕೋಟಿ, ಹೌಹಾರಿದ ಎಸಿಬಿ ಸಿಬ್ಬಂದಿ

ಆದಾಯಕ್ಕಿಂತ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ಆಗಾಗ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ದಾಳಿ ನಡೆಸುತ್ತಲೇ ಇರುತ್ತಾರೆ.
ಗ್ರೂಪ್ ಸಿ ನೌಕರ ಶಿವಲಿಂಗಯ್ಯ ಮನೆಯಲ್ಲಿ ಎಸಿಬಿ ಸಿಬ್ಬಂದಿ
ಗ್ರೂಪ್ ಸಿ ನೌಕರ ಶಿವಲಿಂಗಯ್ಯ ಮನೆಯಲ್ಲಿ ಎಸಿಬಿ ಸಿಬ್ಬಂದಿ

ಬೆಂಗಳೂರು: ಆದಾಯಕ್ಕಿಂತ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ಆಗಾಗ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ದಾಳಿ ನಡೆಸುತ್ತಲೇ ಇರುತ್ತಾರೆ.

ಇವರಲ್ಲಿರುವ ಆಸ್ತಿ ಮೌಲ್ಯ ಸುಮಾರು 10 ಕೋಟಿ. ಯಾವುದೋ ಕಂಪೆನಿಯ CEOನ ಆಸ್ತಿ, ವೇತನ ಎಂದು ನೀವು ಯೋಚಿಸುತ್ತಿದ್ದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ತೋಟಗಾರನಾಗಿ ಕೆಲಸ ಮಾಡುತ್ತಿರುವ ನೌಕರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಸಿಕ್ಕಿಬಿದ್ದಾಗ ಕಂಡುಬಂದ ಆಸ್ತಿಗಳು.

ಹೆಸರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಗ್ರೂಪ್ ಡಿ ನೌಕರ. ಬಿಡಿಎಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಉದ್ಯಾನವನದ ಸ್ವಚ್ಛತೆ, ಉಸ್ತುವಾರಿ ನೋಡಿಕೊಂಡು ಹೋಗುವ ಕೆಲಸ. ಆದರೆ ಮಾಡಿಕೊಂಡ ಆಸ್ತಿಪಾಸ್ತಿ ಕೋಟಿ ಕೋಟಿ. ಆತನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಎಸಿಬಿ ಸಿಬ್ಬಂದಿ ಸುಸ್ತು ಹೊಡೆದು ಹೋದರು.

ಕೋಟಿ ಬೆಲೆ ಬಾಳುವ ನಾಲ್ಕು ಮನೆಗಳು: ಬಿಡಿಎ ಗ್ರೂಪ್ ಡಿ ನೌಕರ ಶಿವಲಿಂಗಯ್ಯ ಬಳಿ ಬೆಂಗಳೂರಿನಲ್ಲಿ ಕೋಟಿ ಬೆಲೆ ಬಾಳುವ ಮೂರು ಮನೆಗಳಿವೆ. ಜೆ ಪಿ ನಗರ, ಕೆ ಎಸ್ ಲೇ ಔಟ್, ದೊಡ್ಡಕಲ್ಲಸಂದ್ರದಲ್ಲಿ 3 ಮನೆ ಹೊಂದಿರುವ ಶಿವಲಿಂಗಯ್ಯ ಪತ್ನಿ ಪೂರ್ಣಿಮಾ ಹೆಸರಲ್ಲಿ ಅಕ್ರಮ ಸಂಪಾದನೆ ಮಾಡಿರುವ ಆರೋಪವಿದೆ. ಜೆ ಪಿ ನಗರದಲ್ಲಿ ಪತ್ನಿ ಹೆಸರಿನಲ್ಲಿ ಬಿಡಿಎ ಸೈಟ್ ಇದೆ. 

4 ಮನೆಗಳು, ಒಂದು ಖಾಲ ಸೈಟು, 510 ಗ್ರಾಂ ಚಿನ್ನಾಭರಣ, 700 ಗ್ರಾಂ ಬೆಳ್ಳಿ ವಸ್ತುಗಳು, 1 ಎಕರೆ 9 ಗುಂಟೆ ಕೃಷಿ ಭೂಮಿ, 2 ದ್ವಿಚಕ್ರ ವಾಹನಗಳು, 3 ಕಾರುಗಳು, 86 ಸಾವಿರ ನಗದು, 80 ಸಾವಿರ ಠೇವಣಿ, 10 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಎಸಿಬಿ ಸಿಬ್ಬಂದಿಗೆ ಸಿಕ್ಕಿವೆ. 

59 ವರ್ಷದ ಶಿವಲಿಂಗಯ್ಯ ಇನ್ನು ಕೇವಲ 13 ದಿನಗಳಲ್ಲಿ ನಿವೃತ್ತರಾಗಬೇಕಿತ್ತು, ಆದರೆ ಎಸಿಬಿ ಅವರ ನಿವೃತ್ತಿಯ ನಿಶ್ಚಿಂತೆಯ ಆರಾಮ ಬದುಕಿಗೆ ಕತ್ತರಿ ಹಾಕಿದೆ. 

ಬಿಡಿಎಯಲ್ಲಿ 35 ವರ್ಷಗಳ ಸೇವೆ ಸಲ್ಲಿಸಿದ ಶಿವಲಿಂಗಯ್ಯ ಅವರ ಮಾಸಿಕ ವೇತನ ಸುಮಾರು 35,000 ರೂಪಾಯಿ. ಬನಶಂಕರಿ ಬಿಡಿಎ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಲಿಂಗಯ್ಯ ಮೇಲೆ ನಾಲ್ಕು ತಿಂಗಳಿನಿಂದ ಎಸಿಬಿ ತೀವ್ರ ನಿಗಾ ಇರಿಸಿದ್ದು, ಶುಕ್ರವಾರ ಬೆಳಗ್ಗೆ ದಾಳಿ ನಡೆಸಿತ್ತು. ನಾವು ಇನ್ನೂ ಸೈಟ್‌ಗಳು ಮತ್ತು ಮನೆಗಳ ಮೌಲ್ಯವನ್ನು ಲೆಕ್ಕಾಚಾರ ಮಾಡಬೇಕಾಗಿದೆ ಆದರೆ ಅವರ ಒಟ್ಟಾರೆ ಸಂಪತ್ತು ಸುಮಾರು 10 ಕೋಟಿಗಳಷ್ಟು ಇರಬಹುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1988ರಲ್ಲಿ ಬಿಡಿಎ ಸೇರಿದ್ದ ಶಿವಲಿಂಗಯ್ಯ ಅವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವೀಂದನ್ ಅವರ ಬಳಿ ಕೆಲಸ ಮಾಡುತ್ತಿದ್ದಾರೆ. ಅವರ ಮಗಳು ಇಂಗ್ಲೆಂಡಿನಲ್ಲಿ ಇಂಜಿನಿಯರ್ ಆಗಿದ್ದು, ಬ್ರಿಟಿಷ್ ಪ್ರಜೆಯನ್ನು ಮದುವೆಯಾಗಿದ್ದಾರೆ. ಮಗ ಬೆಂಗಳೂರಿನಲ್ಲಿ ತನ್ನದೇ ಆದ ಬಾರ್ ಮತ್ತು ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳುತ್ತಾರೆ.

ಅವರ ಪತ್ನಿ ಗೃಹಿಣಿ. ವಿವಿಧ ದರ್ಜೆಯ ಬಿಡಿಎ ಎಂಜಿನಿಯರ್‌ಗಳು, ಕೇಸ್ ವರ್ಕರ್‌ಗಳು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವ ಬ್ರೋಕರ್‌ಗಳ ಮೇಲೆ ಈ ಹಿಂದೆಯೂ ದಾಳಿ ನಡೆಸಲಾಗಿದೆ. ತೋಟಗಾರನಾಗಿ ಕೆಲಸ ಮಾಡುತ್ತಿರುವ ಗ್ರೂಪ್ ಡಿ ನೌಕರನ ಮೇಲೆ ದಾಳಿ ಮಾಡಿದ ಅಪರೂಪದ ಪ್ರಕರಣವಾಗಿದೆ. 

ಎಸಿಬಿ ಅಧಿಕಾರಿಗಳು 21 ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಖಚಿತ ಮಾಹಿತಿಯನ್ನು ಸಂಗ್ರಹಿಸಿ ದಾಳಿ ನಡೆಸಿ ಶೋಧ ಮಾಡಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಜೂನ್ 17 ರಂದು ರಾಜ್ಯದ ವಿವಿಧ ಜಿಲ್ಲೆಗಳ 80 ವಿವಿಧ ಸ್ಥಳಗಳಲ್ಲಿ 555 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ 80 ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com