ಹುಬ್ಬಳ್ಳಿ ಕಿಮ್ಸ್ ನಲ್ಲಿ ಹೆಣ್ಣು ಶಿಶು ಅಪಹರಣ ಪ್ರಕರಣ: ಹೆತ್ತ ತಾಯಿಯನ್ನೇ ಬಂಧಿಸಿದ ಪೊಲೀಸರು!

40 ದಿನದ ಹೆಣ್ಣು ಶಿಶು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಆದರೆ, ವಿಚಿತ್ರವೆಂದರೆ, ಈ ಪ್ರಕರಣದಲ್ಲಿ ಹೆತ್ತ ತಾಯಿಯೇ ಪ್ರಮುಖ ಆರೋಪಿಯಾಗಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶಿಶುವಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರೊಂದಿಗೆ ಮಗುವಿನ ತಾಯಿ
ಪೊಲೀಸರೊಂದಿಗೆ ಮಗುವಿನ ತಾಯಿ

ಹುಬ್ಬಳ್ಳಿ: 40 ದಿನದ ಹೆಣ್ಣು ಶಿಶು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಆದರೆ, ವಿಚಿತ್ರವೆಂದರೆ, ಈ ಪ್ರಕರಣದಲ್ಲಿ ಹೆತ್ತ ತಾಯಿಯೇ ಪ್ರಮುಖ ಆರೋಪಿಯಾಗಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶಿಶುವಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಧಾರವಾಡ ಜಿಲ್ಲೆ ಕುಂದಗೋಳ್ ಪಟ್ಟಣದ ಒಂದೂವರೆ ತಿಂಗಳ ಶಿಶುವನ್ನು ಜೂನ್ 10 ರಂದು ಅನಾರೋಗ್ಯದ ಸಮಸ್ಯೆಯಿಂದಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಜೂನ್ 13 ರಂದು ಆಸ್ಪತ್ರೆಯಿಂದ ಆ ಶಿಶುವನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ, ಅದೇ ದಿನ ಮಧ್ಯಾಹ್ನ, ತನ್ನ ಮಗುವನ್ನು ಅಪರಿಚಿತರು ಅಪಹರಣ ಮಾಡಿರುವುದಾಗಿ ಮಗುವಿನ ತಾಯಿ ಆರೋಪಿಸಿದ್ದಳು. 

ಈ ಕೇಸ್ ತನಿಖೆಗಾಗಿ ರಚಿಸಲಾಗಿದ್ದ ಮೂರು ಪೊಲೀಸ್ ತಂಡಗಳು, ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಮರುದಿನ ಬೆಳಿಗ್ಗೆ ಮಕ್ಕಳ ವಿಭಾಗದ ಹಿಂಭಾಗದಲ್ಲಿ ಮಗು ಪತ್ತೆಯಾಗಿದೆ. ವಿಚಾರಣೆ ವೇಳೆ ಅಪಹರಣದ ಬಗ್ಗೆ ಸಣ್ಣ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ತಾಯಿ ಉಮ್ಮೆ ಜೈನಾಬ್ ಹುಸೇನಸಾಬ್ ಶೇಖ್ ಅಕಾ ಸಲ್ಮಾ ಮೇಲೆ ಶಂಕೆಪಟ್ಟಿದ್ದಾರೆ. ಮಗು ಮೈಕ್ರೊಸೆಫಾಲಿ ಮತ್ತಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿತ್ತು. ಹೀಗಾಗಿ ತಾಯಿ ಆಸ್ಪತ್ರೆಯಲ್ಲಿ ಮಗುವಿನ ಅಪಹರಣದ ನಾಟಕವಾಡಿದ್ದಾಳೆ.

ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ವಾರ್ಡ್ ನಿಂದ ಮಗುವಿನೊಂದಿಗೆ ವಾಶ್ ರೂಮ್ ಗೆ ಹೋದ ತಾಯಿ, ಬರುವಾಗ ಖಾಲಿ ಕೈಯಲ್ಲಿ ಬಂದಿರುವುದು ಪತ್ತೆಯಾಗಿತ್ತು. ಈ ಸುಳಿವಿನ ಆಧಾರದ ಮೇಲೆ ಪ್ರಶ್ನಿಸಿದಾಗ ಆಕೆ ಅಪರಾಧದ ತಪ್ಪೊಪ್ಪಿಕೊಂಡಿದ್ದಾಗಿ ವಿಚಾರಣಾಧಿಕಾರಿ ತಿಳಿಸಿದರು.

ಹಿಂದಿನ ಮಗು ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ವೈದ್ಯರ ಸಲಹೆ ಮೇರೆಗೆ ಗರ್ಭಪಾತ ಮಾಡಿಸಿಕೊಂಡಿದ್ದ ಸಲ್ಮಾ, ಈಗಿನ ಮಗು ಕೂಡಾ ಮೈಕ್ರೋಸೆಫಾಲಿ ಮತ್ತಿತರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಮಗು ಬದುಕುಳುವುದಿಲ್ಲ ಎಂದು ಯೋಚಿಸಿದ್ದಳು. ಆದ್ದರಿಂದ ವಾಶ್ ರೂಮ್ ನ ಕಿಟಕಿ ಮೂಲಕ ಮಗುವನ್ನು ಹೊರಗೆ ಎಸೆದಿದ್ದಳು ಎಂದು ಅವರು ಹೇಳಿದರು. 

ಪ್ರಸ್ತುತ ಮಗುವಿನ ತಾಯಿ ನ್ಯಾಯಾಂಗ ಬಂಧನದಲ್ಲಿದ್ದು, ಮಗುವಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಚೇತರಿಸಿಕೊಂಡ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಆರೈಕೆಗಾಗಿ ಮಗುವನ್ನು ವೈದ್ಯರು ಹಸ್ತಾಂತರಿಸಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ತಾಯಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬು ರಾಮ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com