ಪಂಚಮಸಾಲಿ 2ಎ ಹೋರಾಟ: ಸರ್ಕಾರದ ಭರವಸೆಯ ನಂತರ ಸಿಎಂ ನಿವಾಸ ಮುತ್ತಿಗೆಗೆ ತಾತ್ಕಾಲಿಕ ತಡೆ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹೋರಾಟಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಇನ್ನೆರಡು ತಿಂಗಳಲ್ಲಿ ಸಮುದಾಯದ ಬೇಡಿಕೆ...
Published: 22nd June 2022 07:29 PM | Last Updated: 22nd June 2022 07:29 PM | A+A A-

ಜಯಮೃತ್ಯುಂಜಯ ಸ್ವಾಮೀಜಿ
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹೋರಾಟಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಇನ್ನೆರಡು ತಿಂಗಳಲ್ಲಿ ಸಮುದಾಯದ ಬೇಡಿಕೆ ಈಡೇರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇಂದು ಸಿಸಿ ಪಾಟೀಲ್ ನಿವಾಸದಲ್ಲಿ ಸಮುದಾಯದ ಮುಖಂಡರ ಜೊತೆ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ಸಿಸಿ ಪಾಟೀಲ್, ೭೫೦ ಕಿಲೋಮೀಟರ್ ಪಾದಯಾತ್ರೆ ನಡೆದಿದೆ. ಬೆಂಗಳೂರಿನಲ್ಲಿ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆದಿತ್ತು. ಮೀಸಲಾತಿ ಸಾಧ್ಯವೇ ಎಂಬ ಅನುಮಾನ ಇತ್ತು. ಆದರೆ ಛಲಬಿಡದೆ ಹೋರಾಟ ಮುನ್ನಡೆಸಿದ್ರು. ಹೋರಾಟದ ಪರವಾಗಿ ಸಿಹಿಸುದ್ದಿ ಬರಲಿದೆ. ಸ್ವಲ್ಪ ದಿನಗಳಲ್ಲೇ ಸಿಹಿ ಸುದ್ದಿ ಸಿಗಲಿದೆ. ಹೋರಾಟಕ್ಕೆ ಹಲವರು ಸಹಕಾರ ಕೊಟ್ಟಿದ್ದರು. ಅರಮನೆ ಮೈದಾನದಲ್ಲಿ ಸಭೆಗೆ ಅನುಮತಿಯಿಲ್ಲದಿದ್ದರೂ ಸಭೆಗೆ ಅಂದು ಬೊಮ್ಮಾಯಿ ಅವಕಾಶ ಕೊಟ್ಟಿದ್ರು ಎಂದು ಹೇಳಿದರು.
ಇದನ್ನು ಓದಿ: ಬಿಜೆಪಿಗೆ ಬಿಸಿ ತುಪ್ಪವಾಗುತ್ತಿದೆಯೇ ಪಂಚಮಸಾಲಿಗಳ ಮುನಿಸು?
ಇವತ್ತು ಎದುರು ಬದುರು ಕಿತ್ತಾಡುವವರಿದ್ದೇವೆ. ಇವತ್ತು ಶ್ರೀಗಳು ಸೇರಿದಂತೆ ಬೆಲ್ಲದ್, ಯತ್ನಾಳ್, ಕುಲಕರ್ಣಿ ಎಲ್ಲರೂ ಸೇರಿದ್ವಿ. ಇವತ್ತು ನನ್ನ ಮನೆಯಲ್ಲೇ ಸಭೆ ಸೇರಿದ್ದು ಖುಷಿ ಕೊಟ್ಟಿದೆ. ಹೋರಾಟ ಅಂತಿಮ ಚರಣದಲ್ಲಿದೆ. ಶೀಘ್ರದಲ್ಲೇ ಸುಖಾಂತ್ಯ ಕಾಣಲಿದೆ. ನಾನು, ಯತ್ನಾಳ್ ಸಿಎಂ ಜೊತೆ ಮಾತನಾಡಿದ್ದೇವೆ. ಸಿಎಂ ಎರಡು ತಿಂಗಳು ಸಮಯ ಕೇಳಿದ್ದಾರೆ. ಕೆಲವು ವಿಷಯಗಳನ್ನ ಬಹಿರಂಗಪಡಿಸಲ್ಲ. ಕಾನೂನಿನ ತೊಡಕುಗಳಿರೋದ್ರಿಂದ ಹೇಳಲ್ಲ. ಶ್ರೀಗಳ ಮೇಲೆ ಎಲ್ಲರೂ ವಿಶ್ವಾಸವಿಡಿ ಎಂದರು.
2ಎ ಮೀಸಲಾತಿ ತಕ್ಷಣವೇ ಕೊಡಲು ಸಾಧ್ಯವಿಲ್ಲ. ನಾವು ಎಷ್ಟೇ ಹೋರಾಟ ಮಾಡಿದ್ರೂ ಸರ್ಕಾರ ಮನಸ್ಸು ಮಾಡದಿದ್ದರೆ ಏನೂ ಅಗಲ್ಲ. ಹಾಗಾಗಿ ಸ್ವಲ್ಪ ದಿನ ತಾಳ್ಮೆಯಿಂದ ಕಾಯೋಣ. ಪೂಜ್ಯರು ಸಂತೋಷಗೊಂಡಿದ್ದಾರೆ. ಎರಡು ತಿಂಗಳಲ್ಲಿ ಉತ್ತಮ ಫಲಿತಾಂಶ ಬರುತ್ತೆ. ಹೋರಾಟವನ್ನ ನೀವು ಮುಂದೂಡಬೇಕು. ಸಮಾಜದ ಪ್ರತಿ ಮನೆಯಲ್ಲಿ ಶ್ರೀಗಳ ಫೋಟೋ ಇರಲಿದೆ ಎಂದು ಸಮಾಜದ ಮುಖಂಡರಿಗೆ ಸಿ.ಸಿ.ಪಾಟೀಲ್ ಭರವಸೆ ನೀಡಿದರು.
ಬಳಿಕ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಈ ಹಿಂದೆ ಸರ್ಕಾರ ಭರವಸೆ ಈಡೇರಿಸಿಲ್ಲ. ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನ ಮಾಡಿದ್ದೆವು. ಸಾಕಷ್ಟು ಪೂರ್ವಭಾವಿ ಸಭೆ ಕೂಡ ಮಾಡಿದ್ದೇವೆ. ಆದರೆ ಸಿಎಂ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಸಿಎಂ ಭರವಸೆ ಕೊಡುವ ತನಕ ಹೋರಾಟ ಕೈ ಬಿಡಲ್ಲ ಎಂದಿದ್ವಿ. ಇದೀಗ ಎರಡು ತಿಂಗಳ ಸಮಯ ಕೇಳಿದ್ದಾರೆ. ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಮುಂದಿನ ಆಗಸ್ಟ್ ೨೨ರಂದು ಮೀಸಲಾತಿ ಕೊಡ್ತೀವಿ ಎಂದು ತಿಳಿಸಿದ್ದಾರೆ ಎಂದರು.
ಹೀಗಾಗಿ ಸಿಎಂ ಮನೆ ಮುಂದಿನ ಧರಣಿ ಮುಂದೂಡಲಾಗಿದೆ. ಗದಗ, ಹಾವೇರಿ ಜಿಲ್ಲೆಯಲ್ಲಿ ಜಾಗೃತಿ ಮಾಡ್ತೇವೆ. ಆಕಸ್ಮಾತ್ ಭರವಸೆ ಈಡೇರಿಲ್ಲ ಅಂದರೆ ಹೋರಾಟ ಅನಿವಾರ್ಯ. ಶಿಗ್ಗಾಂವ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ. ಸಿಸಿ ಪಾಟೀಲ್, ಅರವಿಂದ್ ಬೆಲ್ಲದ್ ನಮ್ಮ ಜೊತೆಗೆ ಇರ್ತಾರೆ. ಆಯೋಗದ ವರದಿ ಪಡೆಯುತ್ತಾರಂತೆ. ಸಿಎಂ ಬೊಮ್ಮಾಯಿ ತೀರ್ಮಾನ ಮಾಡ್ತಾರಂತೆ. ಹೋರಾಟ ಶುರು ಮಾಡಿದ ಮೇಲೆ ಸರ್ವೇ ಆರಂಭ ಆಗಿದೆ ಎಂದು ಜಯಮೃತ್ಯುಂಜಯ ಶ್ರೀಗಳು ತಿಳಿಸಿದರು.