ಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ, ಮಾಗಡಿ ಕೋಟೆ ಸಂರಕ್ಷಣೆ- ಡಾ.ಸಿ.ಎನ್.ಅಶ್ವತ್ಥ ನಾರಾಯಣ
ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ಮೂವರು ಸಾಧಕರಿಗೆ ತಲಾ 5 ಲಕ್ಷ ರೂಪಾಯಿ ನಗದು ಸಹಿತ ಅಂತಾರಾಷ್ಟ್ರೀಯ ಪ್ರಶಸ್ತಿ ಕೊಡಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
Published: 23rd June 2022 03:14 PM | Last Updated: 23rd June 2022 03:14 PM | A+A A-

ಡಾ.ಸಿ.ಎನ್. ಅಶ್ವತ್ಥ ನಾರಾಯಣ
ರಾಮನಗರ: ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ಮೂವರು ಸಾಧಕರಿಗೆ ತಲಾ 5 ಲಕ್ಷ ರೂಪಾಯಿ ನಗದು ಸಹಿತ ಅಂತಾರಾಷ್ಟ್ರೀಯ ಪ್ರಶಸ್ತಿ ಕೊಡಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಮಾಗಡಿ ಕೋಟೆಯಲ್ಲಿ ಇಂದು ಏರ್ಪಡಿಸಿದ್ದ ಕೆಂಪೇಗೌಡರ 513ನೇ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಕಟ್ಟಿಸಿರುವ ಇಲ್ಲಿನ ಐತಿಹಾಸಿಕ ಕೋಟೆಯನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿ ಸಂರಕ್ಷಿಸಲಾಗುವುದು ಎಂದು ಭರವಸೆ ನೀಡಿದರು.
ಕೆಂಪೇಗೌಡರ ವೀರ ಸಮಾಧಿ ಇರುವ ತಾಲೂಕಿನ ಕೆಂಪಾಪುರ ಗ್ರಾಮದಲ್ಲಿ ಪರಂಪರೆ ಸಂರಕ್ಷಣೆಯನ್ನು ಸರ್ಕಾರ ಮಾಡುತ್ತಿದೆ. ಜೊತೆಗೆ ನಾಡುಪ್ರಭುವಿಗೆ ಸೇರಿದ ಸಾವನದುರ್ಗ, ಹುಲಿಯೂರು ದುರ್ಗ ಮುಂತಾದ ಸ್ಥಳಗಳನ್ನು ಕೂಡಾ ಆಕರ್ಷಕವಾಗಿ ಅಭಿವೃದ್ಧಿ ಮಾಡಲಾಗುವುದು ಜೊತೆಗೆ ಇದೇ 27 ರಂದು ಕೆಂಪೇಗೌಡರ ಜಯಂತಿಯನ್ನು ವಿಧಾನಸೌಧದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಅವರು ತಿಳಿಸಿದರು.
ನಮ್ಮ ರಾಮನಗರದಲ್ಲಿ ಕೆಂಪೇಗೌಡರ ಕಾಲದ ಸುಮಾರು 2,500 ಕೆರೆಗಳ ಪುನರುತ್ಥಾನದ ಗುರಿ ಹೊಂದಲಾಗಿದ್ದು ನರೇಗಾ ಯೋಜನೆಯಡಿ ಈಗಾಗಲೇ ಸಾವಿರಕ್ಕೂ ಅಧಿಕ ಕೆರೆಗಳನ್ನು ಸ್ವಚ್ಛಗೊಳಿಸಲಾಗಿದೆ.
— Dr. Ashwathnarayan C. N. (@drashwathcn) June 23, 2022
ಕೆಂಪೇಗೌಡರ ಅವಧಿಯ ಕೋಟೆ-ಕೊತ್ತಲೆಗಳು, ಗುಡಿ-ಗೋಪುರಗಳು, ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳನ್ನಾಗಿ ರೂಪಿಸಲಾಗುತ್ತಿದೆ. pic.twitter.com/9HVmJftfuE
ಕೆಂಪೇಗೌಡರಿಗೆ ಸೂಕ್ತ ಗೌರವ ನೀಡುವ ಉದ್ದೇಶದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಬೃಹತ್ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಸಾವಿರಾರು ಕೆರೆಗಳನ್ನು ಪುನಶ್ಚೇತನಗೊಳಿಸುವ ಮತ್ತು ಅವುಗಳಿಗೆ ನೀರು ತುಂಬವ ಕೆಲಸ ಮಾಡಲಾಗುವುದು, ಈ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಜೀವ ತುಂಬಲಾಗುವುದು ಎಂದು ಅವರು ಹೇಳಿದರು.
ಕೆಂಪೇಗೌಡರ ದೂರದೃಷ್ಟಿಯಿಂದಾಗಿ ಬೆಂಗಳೂರು ನಗರ ಇಂದು ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಇಂತಹ ಕೀರ್ತಿ ಭಾರತದ ಬೇರಾವ ನಗರಗಳಲ್ಲಿಯೂ ಇಲ್ಲ ಎಂದು ಅಶ್ವತ್ಥ ನಾರಾಯಣ ಸ್ಮರಿಸಿದರು.