ಒಕ್ಕಲಿಗ ಅಭಿವೃದ್ಧಿ ಮಂಡಳಿ ರಚನೆಯಾಗಿ ವರ್ಷವಾದರೂ ಕಚೇರಿಗೆ ಇನ್ನೂ ಸಿಕ್ಕಿಲ್ಲ ಜಾಗ!

ಒಕ್ಕಲಿಗ ಅಭಿವೃದ್ಧಿ ಮಂಡಳಿ ರಚನೆ ಮಾಡಿ ಒಂದು ವರ್ಷ ಕಳೆದರೂ ಆಡಳಿತ ಮಂಡಳಿಗೆ ಮಾತ್ರ ಇನ್ನೂ ಕಚೇರಿ ದೊರೆತಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಒಕ್ಕಲಿಗ ಅಭಿವೃದ್ಧಿ ಮಂಡಳಿ ರಚನೆ ಮಾಡಿ ಒಂದು ವರ್ಷ ಕಳೆದರೂ ಆಡಳಿತ ಮಂಡಳಿಗೆ ಮಾತ್ರ ಇನ್ನೂ ಕಚೇರಿ ದೊರೆತಿಲ್ಲ.

ಆಗಿನ ಸಿಎಂ ಬಿಎಸ್ ಯಡಿಯೂರಪ್ಪ ಅವರು 2021ರ ಮಾರ್ಚ್‌ನಲ್ಲಿ ಮಂಡಳಿಗೆ ಹಣವನ್ನು ಮಂಜೂರು ಮಾಡಿದ್ದರು. ಜುಲೈ 2021ರಲ್ಲಿ ಮಂಡಳಿ ರಚನೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಆಡಳಿತ ಮಂಡಳಿ ರಚನೆಯಾಗಿ ಒಂದು ವರ್ಷವಾದರೂ ಇನ್ನು ಕಚೇರಿ ಸಿಕ್ಕಿಲ್ಲ ಹಾಗೂ ಸಿಬ್ಬಂದಿಗಳೂ ನೇಮಕಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಬಿಜೆಪಿ ಶಾಸಕ ಸುರೇಶ್ ಗೌಡ (ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ) ಸೇರಿದಂತೆ ಇಬ್ಬರು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಹಿಂದುಳಿದ ಮೀಸಲಾತಿ (3ಎ) ಪ್ರಕಾರ, ಒಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಾಡ್ಕರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮು, ರೆಡ್ಡಿ, ಗೌಂಡರ, ಉಪ್ಪಿನ ಕೊಳಗ ಇತರೆ ಜಾತಿಗಳು ಒಕ್ಕಲಿಗ ಸಮುದಾಯದ ಅಡಿಯಲ್ಲಿ ಬರಲಿದೆ.

ಈ ಕುರಿತು ಎಂ.ಕೃಷ್ಣಪ್ಪ ಅವರು ಪ್ರತಿಕ್ರಿಯೆ ನೀಡಿ, ಬೆಂಗಳೂರಿನ ಯೂನಿಟಿ ಬಿಲ್ಡಿಂಗ್ ಬಳಿ ಬಾಡಿಗೆಗೆ ಕಚೇರಿ ಸ್ಥಳವನ್ನು ಪಡೆಯಲಾಗುತ್ತಿದೆ. ಜೂನ್. 26 ರಂದು ಕೆಂಪೇಗೌಡ ಜಯಂತಿಯಂದು ಕಚೇರಿಯನ್ನು ಉದ್ಘಾಟಿಸಲು ಯೋಜಿಸಲಾಗಿದೆ ಎಂದು ಹೇಳಿದರು. ಆದರೆ, ಈ ಬಗ್ಗೆ ಸುರೇಶ್ ಗೌಡ ಅವರ ಪ್ರತಿಕ್ರಿಯೆ ಕೇಳಿದಾಗ, ಈ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಮಂಡಳಿಯು ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ಮಾತ್ರ ಸಭೆ ನಡೆಸಿದ್ದು, ಸಭೆ ಸೇರಲು ಕಚೇರಿ ಇಲ್ಲದ ಕಾರಣ ವಿಕಾಸ ಸೌಧದ ಸಮ್ಮೇಳನ ಸಭಾಂಗಣವನ್ನು ಸಭೆಗೆ ಬಳಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಒಕ್ಕಲಿಗ ಅಭಿವೃದ್ಧಿಗಾಗಿ ಯೋಜನೆ ರೂಪಿಸಲು ಹಾಗೂ ಸಭೆ ನಡೆಸಲು ಮೀಸಲು ಪ್ರದೇಶ ಬೇಕಿದೆ. ಸಭೆ ಸೇರಿದಾಗ ಎಲ್ಲಿ ಕುಳಿತುಕೊಳ್ಳಬೇಕು. ಬಾಡಿಗೆಗೆ ಜಾಗ ಪಡೆದುಕೊಂಡು ಸಿಬ್ಬಂದಿಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಕಚೇರಿ ಸಿಗುವ ಭರವಸೆಯಿದೆ ಸುರೇಶ್ ಗೌಡ ಅವರು ಹೇಳಿದ್ದಾರೆ.

ಘೋಷಿತ 500 ಕೋಟಿ ರೂ.ಗಳಲ್ಲಿ 100 ಕೋಟಿ ರೂ.ಗಳನ್ನು ಈಗಾಗಲೇ ಮಂಡಳಿ ಪಡೆದಿದ್ದು, ಸಮುದಾಯದ ವಿದ್ಯಾರ್ಥಿಗಳಿಗಾಗಿ ಪ್ರತಿ ಜಿಲ್ಲೆಯಲ್ಲಿ ಒಕ್ಕಲಿಗ ವಸತಿ ನಿಲಯಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಮಾರ್ಚ್ ತಿಂಗಳಿನಲ್ಲಿ ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರು ಮಂಡಳಿಯನ್ನು ನೋಂದಾಯಿಸಿಲ್ಲ ಎಂದು ಆರೋಪಿಸಿದ್ದರು. ಆದರೆ, ಒಂದೆರಡು ವಾರಗಳ ಹಿಂದೆಯೇ ಮಂಡಳಿಯನ್ನು ನೋಂದಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com