ಮಂಚದಿಂದ ಕೆಳಗೆ ಬಿದ್ದ ವ್ಯಕ್ತಿ ಸಾವು: ಅಂಗಾಂಗ ದಾನ

ನಿದ್ರೆಯಲ್ಲಿ ಆಕಸ್ಮಿಕವಾಗಿ ಮಂಚದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಕುಟಂಬಸ್ಥರು ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಿದ್ದಾರೆ. 
ಮೃತಪಟ್ಟ ಕೃಷ್ಣಪ್ಪ
ಮೃತಪಟ್ಟ ಕೃಷ್ಣಪ್ಪ

ಬೆಂಗಳೂರು: ನಿದ್ರೆಯಲ್ಲಿ ಆಕಸ್ಮಿಕವಾಗಿ ಮಂಚದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಕುಟಂಬಸ್ಥರು ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಿದ್ದಾರೆ. 

53 ವರ್ಷದ ಕೃಷ್ಣಪ್ಪ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕುಟುಂಬದಲ್ಲಿ ದುಡಿಯುವ ಕೈ ಇವರದ್ದಾಗಿದ್ದು, ಕೃಷ್ಣಪ್ಪ ಅವರು ಪತ್ನಿ ಹಾಗೂ 5 ಮಂದಿ ಮಕ್ಕಳನ್ನು ಅಗಲಿದ್ದಾರೆ. 

ಮೂವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉಜ್ವಲ ಭವಿಷ್ಯ ರೂಪಿಸಲು ಕೃಷ್ಣಪ್ಪ ಅವರು ದಿನಗೂಲಿ ಕಾರ್ಮಿಕನಾದರೂ, ಶ್ರಮಪಟ್ಟು ದುಡಿಯುತ್ತಿದ್ದರು. ಆದರೆ, ಜೂನ್.23 ರಂದು ಮಂಚದ ಮೇಲೆ ಮಲಗಿದ್ದವರು ನಿದ್ರೆಯಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರ ತಲೆಗೆ ಗಂಭೀರವಾದ ಗಾಯವಾಗಿದೆ. ಕೂಡಲೇ ಕುಟುಂಬಸ್ಥರು ನೆಲಮಂಗಲದ ಸರ್ಕಾರೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವಿಕ್ಟೋರಿಯಾ ಆಸ್ಪತ್ರೆಯ ಟಿಸಿಸಿಗೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಬಳಿಕ, ವೈದ್ಯರು ಕೃಷ್ಣಪ್ಪ ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ, ಆ ಎಲ್ಲಾ ಪ್ರಯತ್ನಗಳೂ ವಿಫಲಗೊಂಡಿದ್ದವು. ಬಳಿಕ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು. 

ಈ ವೇಳೆ ದುಃಖ ತಪ್ತ ಕುಟುಂಬಸ್ಥರು ಅವರ ಅಂಗಾಂಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು. ಬಳಿಕ ಶನಿವಾರ ಮಧ್ಯಾಹ್ನ2.30ಕ್ಕೆ ಅಂಗಾಗಳನ್ನು ಪಡೆದುಕೊಂಡ ವೈದ್ಯರು, ಅಂತಿಮ ಸಂಸ್ಕಾರಕ್ಕೆ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಇದೀಗ ಕೃಷ್ಣಪ್ಪ ಅವರ ಅಂಗಾಂಗಗಳು 7 ಮಂದಿಗೆ ಹೊಸ ಜೀವನವನ್ನು ನೀಡಿದೆ.

ಭಾನುವಾರ ನಾರಾಯಣ ಹೃದಯಾಲಯದಲ್ಲಿ ಕೃಷ್ಣಪ್ಪ ಅವರ ಯಕೃತ್ತನ್ನು 65 ವರ್ಷದ ವ್ಯಕ್ತಿಗೆ ಮತ್ತು ಹೃದಯ ಕವಾಟವನ್ನು ಇಬ್ಬರಿಗೆ ಕಸಿ ಮಾಡಲಾಯಿತು, ಬಲ ಮೂತ್ರಪಿಂಡವನ್ನು ಐಎನ್‌ಯು ಆಸ್ಪತ್ರೆಯಲ್ಲಿ 25 ವರ್ಷದ ಪುರುಷನಿಗೆ ಮತ್ತು ಎಡ ಮೂತ್ರಪಿಂಡವನ್ನು ಜೆಎಸ್‌ಎಸ್ ಆಸ್ಪತ್ರೆಯಲ್ಲಿ 32 ವರ್ಷದವರಿಗೆ ದಾನ ಮಾಡಲಾಯಿತು. 

ಇಬ್ಬರಿಗೆ ಅನುಕೂಲವಾಗುವಂತಹ ಕಾರ್ನಿಯಾಗಳನ್ನು ಮಿಂಟೋ ಕಣ್ಣಿನ ಆಸ್ಪತ್ರೆಗೆ ನೀಡಲಾಗುತ್ತಿದ್ದು, ಅನೇಕ ರೋಗಿಗಳಿಗೆ ಅನುಕೂಲವಾಗಲು ಚರ್ಮವನ್ನು ವಿಕ್ಟೋರಿಯಾ ಸ್ಕಿನ್ ಬ್ಯಾಂಕ್‌ಗೆ ದಾನ ಮಾಡಲಾಗಿದೆ ಎಂದು ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ ಮುಖ್ಯ ಕಸಿ ಸಂಯೋಜಕ ಲಿಜಾಮೋಲ್ ಜೋಸೆಫ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com