ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತ: ನೆನಪಿಡಿ, ಉತ್ತಮ ರಸ್ತೆಯೆಂದರೆ ಸುರಕ್ಷಿತ ರಸ್ತೆ ಎಂದರ್ಥವಲ್ಲ!

ದೇಶದ ಅಲ್ಲಲ್ಲಿ ಹೆದ್ದಾರಿಗಳಲ್ಲಿ ವಾಹನ ಅಪಘಾತ... ಇಂತಹ ವಿಷಯಗಳು ಹೆದ್ದಾರಿಗಳಲ್ಲಿ ವಾಹನ ಚಾಲಕರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 27 ವರ್ಷದ ಟೆಕ್ಕಿಯೊಬ್ಬರು ಮೃತಪಟ್ಟರು, ಬೆಳಗಾವಿ-ಧಾರವಾಡ ಬಳಿ ಹೆದ್ದಾರಿಯಲ್ಲಿ ಇತ್ತೀಚೆಗೆ ಹಲವು ಅಪಘಾತವಾಗಿ ಜನ ಪ್ರಾಣ ಕಳೆದುಕೊಂಡಿದ್ದಾರೆ, ದೇಶದ ಅಲ್ಲಲ್ಲಿ ಹೆದ್ದಾರಿಗಳಲ್ಲಿ ವಾಹನ ಅಪಘಾತ... ಇಂತಹ ವಿಷಯಗಳು ಹೆದ್ದಾರಿಗಳಲ್ಲಿ ವಾಹನ ಚಾಲಕರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ವಾಹನ ಚಾಲಕರು ಚಾಲನೆ ಮಾಡುವಾಗ ಎಲ್ಲಾ ನಿಗದಿತ ಮಾನದಂಡಗಳನ್ನು ಅನುಸರಿಸಬೇಕು. ಅತಿ ವೇಗದ ಚಾಲನೆ ಮಾಡುವವರಿಗೆ ದಂಡ ವಿಧಿಸಲು ಹೆದ್ದಾರಿಗಳ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನು (Artificial intelligence camera) ಅಳವಡಿಸುವ ಅವಶ್ಯಕತೆಯಿದೆ ಎಂದು ಭಾರತೀಯ ರಸ್ತೆ ಕಾಂಗ್ರೆಸ್ (IRC) ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ವಾಹನ ಚಾಲಕರು, ಹಸ್ತಚಾಲಿತ ಟ್ರಾಫಿಕ್ ಇಂಟರ್‌ಸೆಪ್ಟರ್ ವಾಹನವನ್ನು ನೋಡಿದಾಗ ವೇಗವನ್ನು ಕಡಿಮೆ ಮಾಡುತ್ತಾರೆ. ರಸ್ತೆ ಚೆನ್ನಾಗಿದ್ದಾಗ ಪ್ರಯಾಣಿಸುತ್ತಾರೆ. ಈ ವಲಯಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ, ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳು ಅಗತ್ಯವಾಗಿದೆ ಎಂದು ಐಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೇರೆ ದೇಶಗಳಲ್ಲಿ ಹೆದ್ದಾರಿಗಳಲ್ಲಿ ವೇಗದ ಮಿತಿ 120 ಕಿಲೋ ಮೀಟರ್ ಆಗಿದ್ದರೆ, ಭಾರತದಲ್ಲಿ 80ರಿಂದ 100 ಕಿಲೋ ಮೀಟರ್ ಆಗಿದೆ. ಹೆದ್ದಾರಿಗಳನ್ನು ಈ ವೇಗಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಹಲವು ಪ್ರಯಾಣಿಕರು ಗಂಟೆಗೆ 160 ಕಿಮೀ ವೇಗದಲ್ಲಿ ಸವಾರಿ ಮಾಡುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತವೆ.ಸಂಚಾರ ಪೊಲೀಸರು ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಕೂಡ ಹೆಚ್ಚು ಜಾಗರೂಕರಾಗಿರಬೇಕು. ವೇಗದ ಉಲ್ಲಂಘನೆಗಳ ಬಗ್ಗೆ ನಿಗಾ ಇಡಬೇಕು ಎಂದು ಅಧಿಕಾರಿ ಹೇಳುತ್ತಾರೆ.

ಸಾಮಾನ್ಯವಾಗಿ, ಉತ್ತಮ ರಸ್ತೆಗಳನ್ನು ಸವಾರರಿಗೆ ಒದಗಿಸುವುದು ನಮ್ಮ ಕೆಲಸ. ಆದರೆ ಜನರು ಮಿತಿಮೀರಿದ ವೇಗದಲ್ಲಿ ಸಂಚರಿಸಬಾರದು. 5-8 ಸೆಕೆಂಡುಗಳಲ್ಲಿ ವಾಹನಗಳ ವೇಗವನ್ನು 0-100 ಕಿಲೋಮೀಟರ್ ನಿಂದ ಹೆಚ್ಚಿಸುವ ರೀತಿಯಲ್ಲಿ ಹೊಸ ವಾಹನಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡಲಾಗುತ್ತದೆ. ಅನೇಕ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳು ‘80 ನಿಮಿಷಗಳಲ್ಲಿ ವಿಮಾನ ನಿಲ್ದಾಣವನ್ನು ತಲುಪಿ’ ಅಥವಾ ‘ಬೆಂಗಳೂರಿನಿಂದ 90 ನಿಮಿಷಗಳಲ್ಲಿ ಮೈಸೂರಿಗೆ ತಲುಪಿ’ ಎಂದು ಜಾಹೀರಾತು ನೀಡುತ್ತವೆ. ಆದರೆ ಅವರು ಸವಾರಿ ಮಾಡುವ ವೇಗದ ಬಗ್ಗೆ ಯಾರೂ ಮಾತನಾಡುವುದಿಲ್ಲ. ವಾಹನ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಗಳ ಬಗ್ಗೆಯೂ ಯೋಚಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಹಾಕುವಂತಿಲ್ಲ. ಅಲ್ಲದೆ ವಾಹನಗಳು ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸುವಾಗ ಕಲ್ಲುಮಣ್ಣುಗಳ ಪಟ್ಟಿಗಳು ಉಪಯೋಗಕ್ಕೆ ಬರುವುದಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಕಚೇರಿಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ವಸತಿ ಪ್ರದೇಶಗಳ ಬಳಿ ನಿವಾಸಿಗಳು ಹಾಕುತ್ತಾರೆ. ಇಂತಹ ಕಡೆಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಇದಕ್ಕೆ ಹೆದ್ದಾರಿ ಪ್ರಾಧಿಕಾರವನ್ನು ದೂರಿ ಪ್ರಯೋಜನವಿಲ್ಲ ಎಂದು ಎನ್ಎಚ್ಎಐ ಅಧಿಕಾರಿಯೊಬ್ಬರು ಹೇಳುತ್ತಾರೆ.

ಉತ್ತಮ ಮಾರ್ಗಗಳು ಎಂದರೆ ಸುರಕ್ಷಿತ ಮಾರ್ಗವೆಂದು ಅರ್ಥವಲ್ಲ. ಹೆದ್ದಾರಿಗಳಲ್ಲಿ ಅತಿವೇಗದ ಚಾಲನೆಯೇ ಆತಂಕಕಾರಿ ಮತ್ತು ಕಳವಳಕಾರಿ ಸಂಗತಿಯಾಗಿದೆ. ನಾವೆಲ್ಲ ವಾಹನ ಚಾಲನೆ ಮಾಡುವಾಗ ರಸ್ತೆ ಉತ್ತಮವಾಗಿರಬೇಕು ಎಂದು ಬಯಸುತ್ತೇವೆ. ಆದರೆ ರಸ್ತೆ ಉತ್ತಮವಾದಾಗ ಸವಾರರು ಬೇಕಾಬಿಟ್ಟಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತವೆ. ಉತ್ತಮ ರಸ್ತೆಗಳೆಂದರೆ ಜನರಿಗೆ ಅತಿವೇಗವಾಗಿ ಚಾಲನೆ ಮಾಡಲು ಅನುಮತಿ ಅಥವಾ ಪರವಾನಗಿ ಸಿಕ್ಕಿದೆಯೆಂದರ್ಥವಲ್ಲ, ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com