ರಾಜ್ಯದ ಆಯ್ದ ಸ್ಥಳಗಳಲ್ಲಿ 24 ಗಂಟೆ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಸರ್ಕಾರ ಅನುಮತಿ
ಹೊಟೇಲ್ ಮತ್ತು ರೆಸ್ಟೊರೆಂಟ್ಸ್ ಅಸೋಸಿಯೇಷನ್ ಇಟ್ಟಿದ್ದ ಪ್ರಸ್ತಾವನೆಯನ್ನು ಬುಧವಾರ ರಾಜ್ಯ ಸರ್ಕಾರ ಅಂಗೀಕರಿಸಿದ್ದು, ಇನ್ನು ಮುಂದೆ ರಾಜ್ಯದಾದ್ಯಂತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಯ್ದ ಸ್ಥಳಗಳಲ್ಲಿ 24x7 ತೆರೆಯಬಹುದಾಗಿದೆ.
Published: 30th June 2022 07:23 AM | Last Updated: 30th June 2022 01:57 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಹೊಟೇಲ್ ಮತ್ತು ರೆಸ್ಟೊರೆಂಟ್ಸ್ ಅಸೋಸಿಯೇಷನ್ ಇಟ್ಟಿದ್ದ ಪ್ರಸ್ತಾವನೆಯನ್ನು ಬುಧವಾರ ರಾಜ್ಯ ಸರ್ಕಾರ ಅಂಗೀಕರಿಸಿದ್ದು, ಇನ್ನು ಮುಂದೆ ರಾಜ್ಯದಾದ್ಯಂತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಯ್ದ ಸ್ಥಳಗಳಲ್ಲಿ 24x7 ತೆರೆಯಬಹುದಾಗಿದೆ.
ಬಸ್ ಡಿಪೋಗಳು, ರೈಲು ನಿಲ್ದಾಣಗಳು, ಅಂತರ-ರಾಜ್ಯ ಬಸ್ ಟರ್ಮಿನಲ್‌ಗಳು ಮತ್ತು ಇತರ ಸ್ಥಳಗಳಂತಹ ಪ್ರಮುಖ ಮತ್ತು ಆಯ್ದ ಸ್ಥಳಗಳಲ್ಲಿರುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಹೆಚ್ಚಿನ ಸಾರ್ವಜನಿಕ ಸಂಚಾರವಿರುವ ಸ್ಥಳಗಳಲ್ಲಿ 24 ಗಂಟೆ ತೆರೆಯಬಹುದು. ಪೊಲೀಸರು ಅವರಿಗೆ ರಾತ್ರಿಯಿಡೀ ರಕ್ಷಣೆ ನೀಡುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಹೇಳಿದ್ದಾರೆ.
ಸರ್ಕಾರದ ಈ ಆದೇಶಕ್ಕೆ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದು ಹೊಸ ಪ್ರಸ್ತಾವನೆಯಾಗಿರಲಿಲ್ಲ. ಸರ್ಕಾರದ ಆದೇಶ ಸಂತಸ ತಂದಿದ್ದು, ಲಿಖಿತ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಸಿಕ್ಕ ಕೂಡಲೇ ಸುರಕ್ಷತೆಯ ಕಾರಣಗಳಿಗಾಗಿ ಹೋಟೆಲ್/ರೆಸ್ಟೋರೆಂಟ್ ಗಳ ಗೋಡೆಯ ಮೇಲೆ ಅಂಟಿಸಲು ಎಲ್ಲಾ ವಾಣಿಜ್ಯ ಸಂಸ್ಥೆಗಳಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನ ಪ್ರತಿಷ್ಠಿತ ಲಲಿತ್ ಮಹಲ್ ಅರಮನೆ ತಾಜ್ ಗ್ರೂಪ್ ತೆಕ್ಕೆಗೆ ಸಾಧ್ಯತೆ
ಜನನಿಬಿಡ ಪ್ರದೇಶಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ತೆರೆಯಲು ಯಾವಾಗಲೂ ಅನುಮತಿ ಇದೆ. ಆದರೆ, ಪೊಲೀಸ್ ಭದ್ರತೆ ಇಲ್ಲದೆ ತೆರೆಯುವುದು ಕಷ್ಟ ಸಾಧ್ಯವಾಗಿತ್ತು. ಇದೀಗ ಸರ್ಕಾರವೇ ಆದೇಶ ನೀಡಿರುವುದರಿಂದ ಸಮಸ್ಯೆಯಾಗುವುದಿಲ್ಲ ಎಂದು ಹೋಟೆಲ್ ಸಂಘದ ಸದಸ್ಯರೊಬ್ಬರು ಹೇಳಿದ್ದಾರೆ.
ಈ ನಡುವೆ ಆಸ್ಪತ್ರೆಗಳು, ಮಾರುಕಟ್ಟೆಗಳು ಮತ್ತು ಪ್ರವಾಸೋದ್ಯಮ ಇರುವ ಪ್ರದೇಶಗಳಲ್ಲಿ ರಾತ್ರಿ 24 ಗಂಟೆ ಅಥವಾ ಕನಿಷ್ಠ 3 ಗಂಟೆಯವರೆಗೆ ಜನರಿಗೆ ತೊಂದರೆಯಾಗದಂತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಬೇಕು ಎಂದು ಮತ್ತೊಬ್ಬ ಸದಸ್ಯರು ಒತ್ತಾಯಿಸಿದ್ದಾರೆ.