
ಮೃತಪಟ್ಟ ನವೀನ್
ಹಾವೇರಿ: ಉಕ್ರೇನ್ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿ ಮೂಲದ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ಬುಧವಾರ ತಿಳಿದುಬಂದಿದೆ.
ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಬಾಂಬ್ ದಾಳಿಗೆ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಅಸುನೀಗಿದ್ದು, ಆತನ ಮೃತದೇಹವಿರುವ ವಿಡಿಯೋ ಲಭ್ಯವಾಗಿದೆ.
ಇದನ್ನೂ ಓದಿ: ನವೀನ್ ಮೃತದೇಹವನ್ನು ತರುವುದು ನಮ್ಮ ಮೊದಲ ಆದ್ಯತೆ, ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುತ್ತೇವೆ: ಸಿಎಂ ಬೊಮ್ಮಾಯಿ
ನವೀನ್ ಮೃತದೇಹದ ಫೋಟೋ ಹಾಗೂ ವಿಡಿಯೋವನ್ನು ಅಧಿಕಾರಿಗಳು ಉಕ್ರೇನ್ನಲ್ಲಿ ಸಿಲುಕಿರುವ ಅವರ ಸ್ನೇಹಿತರಿಗೆ ರವಾನಿಸಿದ್ದು, ಇದೀಗ ಈ ಫೋಟೋ ಹಾಗೂ ವಿಡಿಯೋಗಳು ನವೀನ್ ಕುಟುಂಬಕ್ಕೆ ಸಿಕ್ಕಿದೆ ಎಂದು ವರದಿಗಳು ತಿಳಿಸಿವೆ. ನವೀನ್ ಅವರ ಮೃತದೇಹ ಪತ್ತೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸದ್ಯ ಖಾರ್ಕಿವ್ ನಲ್ಲಿ ನವೀನ್ ಮೃತದೇಹ ಇದ್ದು, ಇಂದು ಭಾರತಕ್ಕೆ ಸಾಗಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಉಕ್ರೇನ್ ರಾಯಭಾರಿ ಕಚೇರಿ ಮೂಲಕ ನವೀನ್ ಪಾರ್ಥಿವ ಶರೀರ ವಾಪಸ್ ತರಲು ಯತ್ನ ಮಾಡಲಾಗುತ್ತಿದೆ. ಅಧಿಕಾರಿಗಳ ಹಂತದಲ್ಲಿ ಮಾತುಕತೆ ಈಗಾಗಲೇ ನಡೆದಿದ್ದು, ಖಾರ್ಕಿವ್ ನಿಂದ ಇಂದು ಗಡಿಗೆ ರಸ್ತೆ ಮಾರ್ಗವಾಗಿ ಮೃತ ದೇಹ ಸಾಗಿಸುವ ಸಾಧ್ಯತೆ ಇದೆ. ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ರವಾನಿಸಲು ಚಿಂತನೆ ನಡೆಸಲಾಗಿದ್ದು, ದೆಹಲಿ ಮೂಲಕ ರಾಜ್ಯ ಸರ್ಕಾರಕ್ಕೆ ಒಪ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.
ಚಳಗೇರಿ ಗ್ರಾಮದಶೇಕರಪ್ಪ ಗ್ಯಾನಗೌಡರ್ಗೆ ಹರೀಶ ಮತ್ತು ನವೀನ ಗ್ಯಾನಗೌಡರ ಎಂಬ ಇಬ್ಬರು ಮಕ್ಕಳಿದ್ದು, ಎರಡು ಎಕರೆಯಲ್ಲಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದರು. ಮೊದಲು ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶೇಕರಪ್ಪ ನಂತರದಲ್ಲಿ ಜಮೀನಿನ ಕಡೆ ವಾಲಿದ್ದರು. ಕಡುಬಡತನದಲ್ಲಿದ್ದರೂ ಕೂಡ ಮಗನನ್ನು ಡಾಕ್ಟರ್ ಮಾಡುವ ಆಸೆಯನ್ನು ಈ ದಂಪತಿ ಹೊಂದಿದ್ದರು.