ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ, ಮೆರವಣಿಗೆ ನಡೆಸಬಾರದು: ಹೈಕೋರ್ಟ್
ಪ್ರಮುಖ ಬೆಳವಣಿಗೆಯೊಂದರಲ್ಲಿ, ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರೆ ಯಾವುದೇ ಭಾಗದಲ್ಲೂ ರಾಜಕೀಯ ಅಥವಾ ರಾಜಕೀಯೇತರ ಸಂಘಟನೆ ಅಥವಾ ಗುಂಪು ಯಾವುದೇ ಪ್ರತಿಭಟನೆ...
Published: 03rd March 2022 04:53 PM | Last Updated: 03rd March 2022 04:53 PM | A+A A-

ಕರ್ನಾಟಕ ಹೈಕೋರ್ಟ್
ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ, ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರೆ ಯಾವುದೇ ಭಾಗದಲ್ಲೂ ರಾಜಕೀಯ ಅಥವಾ ರಾಜಕೀಯೇತರ ಸಂಘಟನೆ ಅಥವಾ ಗುಂಪು ಯಾವುದೇ ಪ್ರತಿಭಟನೆ, ಮೆರವಣಿಗೆ ಅಥವಾ ಸಭೆಗಳನ್ನು ನಡೆಸಬಾರದು ಎಂದು ಹೈಕೋರ್ಟ್ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.
ಆಂದೋಲನಕ್ಕೆ ಮೀಸಲಾಗಿರುವ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಇತರ ಕಡೆ ಪ್ರತಿಭಟನೆ ಮತ್ತು ಪಾದಯಾತ್ರೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ.
ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರ ಕಡೆ ಪ್ರತಿಭಟನೆ ಅಥವಾ ಅಂತಹ ಯಾವುದೇ ಚಟುವಟಿಕೆಗಳನ್ನು ನಡೆಸಿದರೆ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಕ್ರಮ ತೆಗೆದುಕೊಂಡ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಈ ಆದೇಶವನ್ನು ತಕ್ಷಣವೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
2021ರಲ್ಲಿ ನಗರದಲ್ಲಿ ಟ್ರಾಫಿಕ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ಗೆ ಬರೆದ ಪತ್ರವನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಎಸ್‌ಆರ್ ಕೃಷ್ಣ ಕುಮಾರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ಡಿಜಿ ಮತ್ತು ಐಜಿಪಿ ಮತ್ತು ನಗರ ಪೊಲೀಸ್ ಆಯುಕ್ತರು ಹಾಗೂ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ (ಎಸ್) ಅನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.